×
Ad

ಜು. 9ರಂದು ಕಾರ್ಕಳದಲ್ಲಿ ವಿಕಾಸ ಸೇವಾ ಸಂಸ್ಥೆಯಿಂದ ಬೃಹತ್ ಉದ್ಯೋಗ ಸಂದರ್ಶನ

Update: 2026-06-30 13:46 IST

ಕಾರ್ಕಳ: ಕಾರ್ಕಳ-ಹೆಬ್ರಿ ತಾಲೂಕು ಸೇರಿದಂತೆ ಜಿಲ್ಲೆಯ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ವಿಕಾಸ ಸೇವಾ ಸಂಸ್ಥೆಯ ವತಿಯಿಂದ ಜು. 9ರ ಗುರುವಾರ ಶಾಸಕರ ಜನಸೇವಾ ಕಚೇರಿ ವಿಕಾಸ ಸಭಾಂಗಣದಲ್ಲಿ ಬೃಹತ್ ಉದ್ಯೋಗ ಸಂದರ್ಶನ ನಡೆಯಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನ ಆಯ್ದ 20 ಕಂಪನಿಗಳು ಭಾಗಿಯಾಗಲಿವೆ. ಮೊದಲು ಬಂದ 1000 ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು. ಸುಮಾರು 300ರಿಂದ 400 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ವಿಶೇಷವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಐಟಿಐ ಮತ್ತು ಪಾಲಿಟೆಕ್ನಿಕ್ ಮುಗಿಸಿದ ಉದ್ಯೋಗಾಂಕ್ಷಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು.

ವಿಕಾಸ ಸಂಸ್ಥೆಯು ಕಳೆದ 6 ವರ್ಷಗಳಿಂದ ಉದ್ಯೋಗ ಮೇಳ ಸೇರಿದಂತೆ ಹಲವಾರು ಸಾಮಾಜಿಕ ಸೇವೆ ಮಾಡಿಕೊಂಡು ಬಂದಿದೆ. ಇದೀಗ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಸಂದರ್ಶನ ಆಯೋಜಿಸಿದ್ದು, ಹೆಚ್ಚಿನ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆನ್‌ಲೈನ್ ಅರ್ಜಿ

ಆಕಾಂಕ್ಷಿಗಳು ಆನ್‌ಲೈನ್ ಮೂಲಕ (ಲಿಂಕ್ - https://docs.google.com/forms/d/e/1FAIpQLScv3gxgsEdwRAnRAC4Ka2hTbGJE5jaHh0hfl6RgP57fP2czw/viewform?usp=publish-editor) ಅರ್ಜಿ ಸಲ್ಲಿಸಬಹುದು. ಬಳಿಕ ಜು. 9ರಂದು ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗಿಯಾಗಬೇಕು ಎಂದರು.

ವಸತಿ ವ್ಯವಸ್ಥೆ

ಉದ್ಯೋಗ ಸೇತುವಿನಲ್ಲಿ ಬೆಂಗಳೂರಿನ ಎಂಎನ್‌ಸಿ ಕಂಪನಿಗಳಿಗೆ ಆಯ್ಕೆಯಾದ ಯುವತಿಯರಿಗೆ ಉಚಿತವಾಗಿ ವಸತಿ ಸೌಲಭ್ಯ ದೊರೆಯಲಿದೆ. ಈ ಬಗ್ಗೆ ಈಗಾಗಲೇ ಕಂಪನಿಯೊಂದಿಗೆ ಮಾತನಾಡಿದ್ದೇವೆ ಎಂದು ಶಾಸಕರು ಹೇಳಿದರು. ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಳೆದ ಐದು ವರ್ಷಗಳ ಹಿಂದೆಯೂ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಸುಮಾರು 3000 ಅರ್ಜಿಗಳು ಬಂದಿದ್ದು, 100ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು. 500ಕ್ಕೂ ಅಧಿಕ ಮಂದಿಗೆ ಅಂದು ಉದ್ಯೋಗ ದೊರಕಿತ್ತು. ಇದಲ್ಲದೆ, ಆ ಬಳಿಕವೂ ಯಾರೇ ನಮ್ಮ ಕಚೇರಿಗೆ ಉದ್ಯೋಗ ಅರಸಿ ಬಂದರೂ ವಿವಿಧ ಕಂಪನಿಗಳೊಂದಿಗೆ ಮಾತನಾಡಿ ಉದ್ಯೋಗ ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಕೆಜೆಟಿಟಿ, ಪಾಲಿಟೆಕ್ನಿಕ್, ಐಟಿಐ, ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ದೊರೆತಿದೆ ಎಂದು ಮಾಹಿತಿ ನೀಡಿದರು.

ಜು. 5ರಿಂದ ವಿಕಾಸ ಪರೀಕ್ಷಾ ಸೇತು

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕಟಗೊಂಡಿದ್ದು, ಇದರಲ್ಲಿ ನಮ್ಮ ಭಾಗದ ಹೆಚ್ಚಿನ ಯುವಕರು ಆಯ್ಕೆಯಾಗಬೇಕೆಂಬ ನಿಟ್ಟಿನಲ್ಲಿ ವಿಕಾಸ ಕಚೇರಿಯ ಮೂಲಕ ಬೆಂಗಳೂರಿನ ಅರ್ಚೀವರ್ಸ್ ಟ್ರಸ್ಟ್ ಸಹಯೋಗದೊಂದಿಗೆ 'ವಿಕಾಸ ಪರೀಕ್ಷಾ ಸೇತು' ಎಂಬ ಹೆಸರಿನಲ್ಲಿ ಜು. 5ರಿಂದ 30ರವರೆಗೆ 25 ದಿನಗಳ ಕಾಲ ಉಚಿತವಾಗಿ ಆನ್‌ಲೈನ್‌ನಲ್ಲಿ ತರಬೇತಿ ನೀಡಲಾಗುವುದು. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ 2 ಗಂಟೆಯಂತೆ ಕೋಚಿಂಗ್ ನಡೆಯಲಿದೆ. ಇದಲ್ಲದೆ ಮುಂದೆಯೂ ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿಕಾಸ ಪರೀಕ್ಷಾ ಸೇತು ಮೂಲಕ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುಬ್ರಮಣ್ಯ ಭಟ್ ರೆಂಜಾಳ, ಸುಶಾಂತ್ ಬಜಗೋಳಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಿತಿನ್ ಸಾಲ್ಯಾನ್, ನಗರ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ನಂದಳಿಕೆ ಗ್ರಾಮ ಯುವಮೋರ್ಚಾ ಅಧ್ಯಕ್ಷ ಧೀರಜ್ ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News