ಅರಾಟೆ ಸೇತುವೆ ಕಾಮಗಾರಿ ವೇಳೆ ತಾತ್ಕಾಲಿಕ ಶೀಟುಗಳು ಗಾಳಿ-ಮಳೆಗೆ ಧರಾಶಾಹಿ
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸಂಸದ ಬಿ.ವೈ.ಆರ್. ಸೂಚನೆ
ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಮುಳ್ಳಿಕಟ್ಟೆ ಅರಾಟೆಯ ಹಳೆ ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ತಡೆಗೆ ಕಟ್ಟಿದ ತಾತ್ಕಾಲಿಕ ತಗಡು ಶೀಟುಗಳು ಗಾಳಿ-ಮಳೆಗೆ ಕೆಳಕ್ಕೆ ಉರುಳಿ ಬಿದ್ದಿದೆ.
ಅರಾಟೆ ಸೇತುವೆ ದುರಸ್ತಿ ಕೆಲಸದ ಹಿನ್ನೆಲೆ ಈ ಹಿಂದಿದ್ದ ಡಿವೈಡರ್ ಬಳಿಯ ತಿರುವಿನ (ಡೈವರ್ಶನ್) ಅನತಿ ಹಿಂಭಾ ಗಕ್ಕೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಹಾಗೆಯೇ ಕನ್ನಡಕುದ್ರು ಭಾಗದಿಂದ ಅರಾಟೆ ಸೇತುವೆ ಕಾಮಗಾರಿ ನಡೆಯುತ್ತಿರುವ ಡಿವೈಡರ್ ಮೇಲೆ ತಗಡಿನ ಶೀಟು ಮೂಲಕ ತಾತ್ಕಾಲಿಕ ತಡೆ ಮಾಡಲಾಗಿತ್ತು. ಆದರೆ ಸೋಮವಾರ ಗಾಳಿ ಸಹಿತ ಮಳೆಯಾದ ಪರಿಣಾಮ ಬಹುತೇಕ ಈ ತಗಡು ಶೀಟುಗಳು ಕಾಮಗಾರಿ ಪ್ರದೇಶದತ್ತ ಧರಾಶಾಹಿಯಾಗಿದೆ. ಒಂದೊಮ್ಮೆ ಗಾಳಿಯೊತ್ತಡಕ್ಕೆ ಹೆದ್ದಾರಿ ಕಡೆಗೆ ತೆರಳಿದ್ದರೆ ಅಪಾಯ ಸಂಭವ ಸಾಧ್ಯತೆಯಿತ್ತು.
ಈ ಬಗ್ಗೆ ಸಾರ್ವಜನಿಕರು, ವಾಹನ ಸವಾರರಿಂದ ದೂರು ಬಂದ ಹಿನ್ನೆಲೆ ತಕ್ಷಣ ಸಮಸ್ಯೆ ಬಗೆಹರಿಸಿ, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಸೂಚಿಸಿದ್ದಾರೆ.