×
Ad

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಗಂಗಾಧರ ಪೂಜಾರಿಗೆ ಹುಟ್ಟೂರ ಸನ್ಮಾನ

Update: 2025-11-10 19:43 IST

ಕುಂದಾಪುರ, ನ.10: ಹವಮಾನ ವೈಪರೀತ್ಯ, ಕೂಲಿಯಾಳುಗಳ ಸಮಸ್ಯೆಗಳಿಂದಾಗಿ ಭತ್ತದ ಕೃಷಿಯನ್ನೇ ಕೈ ಬಿಡುತ್ತಿರುವ ಇಂತಹ ಕಾಲ ಘಟ್ಟದಲ್ಲಿ ಸುಮಾರು 45 ಎಕರೆ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಬರೆದ ಕೋಡಿಯ ಗಂಗಾಧರ ಪೂಜಾರಿಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಉಡುಪಿ ಜಿಲ್ಲಾಡಳಿತ ಕೊಡಮಾಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಗಂಗಾಧರ ಪೂಜಾರಿ ಕೋಡಿ ಇವರಿಗೆ ಇಲ್ಲಿನ ಕೋಡಿಯ ಚಕ್ರಮ್ಮ ಸಭಾಭವನದಲ್ಲಿ ರವಿವಾರ ಸಂಜೆ ಜರಗಿದ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟೂರ ಸನ್ಮಾನ ಹೆಮ್ಮೆಯ ಸನ್ಮಾನ. ಹುಟ್ಟೂರ ಸನ್ಮಾನಕ್ಕಿಂತ ಮಿಗಿಲು ಬೇರಾವುದೇ ಸನ್ಮಾನವಿಲ್ಲ. ನಿಷ್ಠೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಕೋಡಿಯ ಕೃಷಿಕ ಗಂಗಾಧರ ಪೂಜಾರಿ ಅವರು ನಮ್ಮೆದುರು ಸಾಕ್ಷಿಯಾಗಿ ನಿಂತಿದ್ದಾರೆ. ಇಂತಹ ಪ್ರಮಾಣಿಕ ಕೃಷಿಕನನ್ನು ಗುರುತಿಸಿ ಸರಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿಕ ಗಂಗಾಧರ ಪೂಜಾರಿ, ನನ್ನ ತಂದೆ ವರ್ಷದ 365 ದಿನವೂ ಕೃಷಿ ಗದ್ದೆಯಲ್ಲಿದ್ದು, ಕೃಷಿ ಚಟುವಟಿಕೆಯನ್ನು ನಡೆಸುತ್ತಾ ಬಂದವರು. ನನ್ನ ಬಾಲ್ಯದ ದಿನಗಳಲ್ಲಿ ತುತ್ತಿನ ಊಟಕ್ಕೂ ಪರದಾಡುತ್ತಿದ್ದೆವು. ತಂದೆಯ ಇಷ್ಟದ ಕ್ಷೇತ್ರ ಕೃಷಿಯನ್ನು ನಾನು ಮುಂದುವರೆಸಿಕೊಂಡು ಬಂದಿದ್ದೇನೆ. ಕೃಷಿ ಕ್ಷೇತ್ರದಲ್ಲಿನ ನನ್ನ ಸಾಧನೆಗೆ ನನ್ನ ತಂದೆಯೇ ಪ್ರೇರಣೆ. ಅವರೇ ನನಗೆ ಆದರ್ಶ. ನನ್ನ ಸಾಧನೆಯನ್ನು ಕಣ್ತುಂಬಿಕೊಳ್ಳುವ ಯೋಗ ನನ್ನ ತಂದೆಗೆ ಸಿಕ್ಕಿಲ್ಲ ಎಂದ ಅವರು ತನಗೆ ಸಿಕ್ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿದರು. ಗೋಪಾಲ ಪೂಜಾರಿ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀನಿವಾಸ ಉಳ್ಳೂರು, ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್, ಉದ್ಯಮಿ ರಾಜೇಂದ್ರ ಶೇರಿಗಾರ್, ಪುರಸಭಾ ಮಾಜಿ ಸದಸ್ಯೆ ಲಕ್ಷ್ಮೀ ಮಾತನಾಡಿದರು.

ರಾಘವೇಂದ್ರ ಪೂಜಾರಿ, ಶಂಕರ ಪೂಜಾರಿ, ತಿಮ್ಮಪ್ಪ ಖಾರ್ವಿ, ನಾಗರಾಜ ಕಾಂಚನ್, ಪುರಸಭೆ ಮಾಜಿ ಸದಸ್ಯರಾದ ಅಶ್ಪಕ್ ಕೋಡಿ, ಕಮಲ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು. ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಸುನಿಲ್ ಪೂಜಾರಿ ಕೋಡಿ ವಂದಿಸಿದರು. ಸತೀಶ್ ವಡ್ಡರ್ಸೆ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಡಿ ಗಂಗಾಧರ್ ಪೂಜಾರಿ ಅವರನ್ನು ರಿಯಾಜ್ ಕೋಡಿ, ಅಬ್ದುಲ್ಲಾ ಕೋಡಿ, ಮುಹಮ್ಮದ್ ಅಲಿ, ಕೆ.ಮುಹಮ್ಮದ್ ಹುಸೈನಾರ್, ಮುಲ್ಲಾ ಮುನಾಫ್ ಕೋಡಿ ಹಿರಿಯರಾದ ಗಡಿ ಮೊಹಮ್ಮದ್ ಸಾಹೇಬ್ ಅಷ್ಪಾಕ್ ಕೋಡಿ ಅಭಿನಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News