ಕನ್ನಡವನ್ನು ಕಡೆಗಣಿಸದೇ, ಇತರ ಭಾಷೆಯನ್ನು ಕಲಿಯಿರಿ: ಸುರೇಂದ್ರ ಅಡಿಗ
ಉಡುಪಿ: ಆಂಗ್ಲಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡೆಗಣಿಸಬಾರದು. ವಿವಿಧ ಭಾಷೆಯನ್ನು ಕಲಿಯುವುದು ಉತ್ತಮ ಅಭ್ಯಾಸ. ಆದರೆ ಕರ್ನಾಟಕದಲ್ಲಿ ಹುಟ್ಟಿದ ನಾವುಗಳು, ಕನ್ನಡವನ್ನು ನಿರ್ಲಕ್ಷಿಸಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಸಾಂಸ್ಕೃತಿಕ ವೇದಿಕೆ, ಚರ್ಚಾ ಮತ್ತು ರಸಪ್ರಶ್ನೆ ಕ್ಲಬಿನ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿದೆ. ಕನ್ನಡ ಕಂಪನ್ನು ರಾಷ್ಟ್ರ - ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಹಿತಿಗಳು, ಜ್ಞಾನಿಗಳು ಪಸರಿಸಿದ್ದಾರೆ. ಇಂತಹ ಭಾಷಿಗರಾದ ನಮಗೆಲ್ಲಾ ಹೆಮ್ಮೆ ಇರಬೇಕು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುರೇಖಾ.ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಪ್ರೀತಿ ಹರೀಶ್ ರಾಜ್, ಮಾನವಿಕ ವಿಭಾಗದ ಮುಖ್ಯಸ್ಥ ರೋಹಿತ್ ಆಮೀನ್, ಐಕ್ಯೂಎಸಿ ಸಂಯೋಜನ ಅಧಿಕಾರಿ ಡಾ.ಜಯಮೋಲ್ ಪಿ.ಎಸ್. ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ಎನ್‌ಎಸ್‌ಎಸ್ ಸಂಯೋಜನಾ ಅಧಿಕಾರಿ ಡಾ.ನವೀನ್‌ಚಂದ್ರ ಸಿಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ದೀಪಕ್ ಕಾಮತ್ ಎಳ್ಳಾರೆ ಸ್ವಾಗತಿಸಿದರು. ಪ್ರಸನ್ನ ವಂದಿಸಿದರು. ಚಂದ್ರಿಕಾ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.