×
Ad

ಗಂಗೊಳ್ಳಿಯಿಂದ ಕುಂದಾಪುರ ನಗರ ಸಂಪರ್ಕಿಸುವ ಸೇತುವೆಗೆ ಡಿಪಿಆರ್: ಬಿ.ವೈ.ರಾಘವೇಂದ್ರ

Update: 2025-11-25 00:30 IST

ಗಂಗೊಳ್ಳಿ: ಗಂಗೊಳ್ಳಿಯಿಂದ ಕುಂದಾಪುರ ನಗರವನ್ನು ಸಂಪರ್ಕಿ ಸುವ ಸುಮಾರು ೧.೩ಕಿ.ಮೀ. ದೂರದ ಸೇತುವೆಗೆ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಜ.೩೦ರೊಳಗೆ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸೂಚಿಸಿದ್ದು, ಅದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ೩ ಪ್ರತ್ಯೇಕ ಡಿಪಿಆರ್ ತಯಾರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಗಂಗೊಳ್ಳಿ -ಕುಂದಾಪುರ ಸೇತುವೆ ನಿರ್ಮಾಣದ ಪ್ರಸ್ತಾವಿತ ಪ್ರದೇಶವನ್ನು ಸೋಮವಾರ ವೀಕ್ಷಿಸಿ, ಅಧಿಕಾರಿ ಗಳಿಂದ ಡಿಪಿಆರ್ ಬಗ್ಗೆ ಮಾಹಿತಿ ಪಡೆದು, ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಸಿಗಂದೂರು ಸೇತುವೆ ಸಹಿತ ಶಿವಮೊಗ್ಗ ಜಿಲ್ಲೆಯ ಅನೇಕ ಊರುಗಳಿಗೆ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ಸಾಧ್ಯವಾಗಿದೆ. ಅದೇ ರೀತಿ ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಿಸಬೇಕು ಅನ್ನುವುದು ನನ್ನ ಕನಸು. ಅದನ್ನು ಸಾಧ್ಯವಾಗಿಸಲು ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತಿದೆ. ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಈ ಬಗ್ಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಸೇತುವೆ ಕನಸು ಈಡೇರುವ ನಿರೀಕ್ಷೆಯಿದೆ ಎಂದವರು ಹೇಳಿದರು.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಸಂಸದರು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಹಿಂದೆ ಕೊಲ್ಲೂರು ಕಾರಿಡಾರ್ ಯೋಜನೆ ಕುರಿತಂತೆ ಪ್ರವಾಸೋದ್ಯಮ ಸಚಿವ ಗಜೇಂದ್ರ ಶೇಖಾವತ್ ಅವರು ಇಲ್ಲಿಗೆ ಭೇಟಿ ನೀಡಿದ್ದಾಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ಬೀಚ್, ಸೋಮೇಶ್ವರ ಬೀಚ್, ಕೊಲ್ಲೂರು ದೇವಸ್ಥಾನವನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ೧೦೦ ಕೋ.ರೂ. ವೆಚ್ಚದ ಯೋಜನೆ ಇದಾಗಿದ್ದು, ಕೆಲವೊಂದು ಅಡೆತಡೆಗಳನ್ನು ನಿವಾರಿಸಿದ್ದು, ಮುಂಬರುವ ಬಜೆಟ್ ನಲ್ಲಿ ಮಂಜೂರಾಗುವ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ಸುರೇಶ ಬಟವಾಡಿ, ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು, ಮೀನುಗಾರ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News