ಉಡುಪಿ, ನ.26: ಗ್ರಾಮೀಣ ಪ್ರದೇಶದಲ್ಲಿ ವೇಗದ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸುವ ಭಾರತ್ ನೆಟ್ ಹಂತ-3 ಯೋಜನೆಯನ್ನು ಸಮರ್ಪಕ ವಾಗಿ ಅನುಷ್ಠಾನ ಮಾಡುವುದರೊಂದಿಗೆ ಜನರಿಗೆ ಗುಣಮಟ್ಟದೊಂದಿಗೆ ವೇಗದ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಮುತುವರ್ಜಿಯಿಂದ ಕೆಲಸ ಮಾಡುವಂತೆ ದೂರಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆಗಳನ್ನು ನೀಡಿದ್ದಾರೆ.

ಇಂದು ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಭಾರತ್ ನೆಟ್ ಹಂತ-3ರ ಅನುಷ್ಠಾನ ಕುರಿತ ಪುನರ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮ ಪಂಚಾಯತ್ ಕಚೇರಿಗಳು, ಸರಕಾರಿ ಶಾಲೆಗಳು, ಅಂಗನವಾಡಿ ಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು ವಿಶ್ವಾಸಾರ್ಹ ಡಿಜಿಟಲ್ ಸಂಪರ್ಕ ಪಡೆಯುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಸರಕಾರದ ಸೇವೆಗಳು ಗ್ರಾಮ ಮಟ್ಟದಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು,ಅಧಿಕಾರಿಗಳು ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಭಾರತ್ ನೆಟ್ ಮೊದಲ ಮತ್ತು ಎರಡನೇ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಎಲ್ಲಾ ಗ್ರಾಮಗಳಿಗೆ ನಿರಂತರ, ವಿಶ್ವಾಸಾರ್ಹ ಹಾಗೂ ಅಡಚಣೆ ರಹಿತ ಸೇವೆ ನೀಡುವ ಅಗತ್ಯವನ್ನು ಮನಗಂಡ ಕೇಂದ್ರಸರ್ಕಾರ ಭಾರತ್‌ ನೆಟ್‌ನ ಮೂರನೇ ಹಂತವಾದ ಅಮೆಂಡೆಡ್ ಭಾರತ್‌ನೆಟ್ ಪ್ರೋಗ್ರಾಂನ್ನು ಜಾರಿಗೆ ತಂದಿದೆ. ಈ ಮೂಲಕ ಗ್ರಾಮ ಪಂಚಾಯತ್‌ಗಳ ಜೊತೆಗೆ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.

ಭಾರತ್‌ನೆಟ್‌ನ ಮೂರನೇ ಹಂತವಾದ ಅಮೆಂಡೆಡ್ ಭಾರತ್‌ನೆಟ್ ಪ್ರೋಗ್ರಾಂ ಅಡಿಯಲ್ಲಿ ರಾಜ್ಯದಲ್ಲಿ ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಪ್ರಸ್ತುತ ಬ್ಲಾಕ್ ಕೇಂದ್ರಗಳಿಂದ ಗ್ರಾಮ ಪಂಚಾಯತ್‌ಗಳಿಗೆ ಕಲ್ಪಿಸಲಾಗಿರುವ ಲೀನಿಯರ್ ಸಂಪರ್ಕ ವ್ಯವಸ್ಥೆಯ ಬದಲಿಗೆ ಐಪಿ-ಎಂಪಿಎಲ್‌ಎಸ್ ಆಧಾರಿತ ರಿಂಗ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ವ್ಯವಸ್ಥೆಯ ಮೂಲಕ ನೆಟ್‌ವರ್ಕ್‌ನ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಭಾರತ್ ನೆಟ್, ಮನೆ, ಶೈಕ್ಷಣಿಕ ಸಂಸ್ಥೆ ಹಾಗೂ ಸರಕಾರಿ ಇಲಾಖೆಗಳಿಗೆ ನೀಡಿದ ಸಂಪರ್ಕಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸೇವೆಯಲ್ಲಿ ವ್ಯತ್ಯಾಸವಾಗಿ ಸಂಸ್ಥೆಯಿಂದ ಸ್ಪಂದನೆ ಸಿಗದೇ ಇದ್ದಾಗ ಜನರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಹೀಗಾಗದಂತೆ ಎಚ್ಚರ ವಹಿಸಬೇಕು. ಬಿಎಸ್ಸೆಎನ್ನೆಲ್ ಇಂಟರ್ನೆಟ್ ಬಗ್ಗೆ ಪ್ರತಿ ಮನೆಗೆ ಕರಪತ್ರ ಹಂಚಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಪಿಡಿಓಗಳಿಗೆ ಸೂಚಿಸಿದ ಅವರು, ಭಾರತ್ ನೆಟ್‌ನ ಫ್ರಾಂಚೈಸಿಯಾಗಲು ಸ್ಥಳೀಯ ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಜನರಿಗೆ ತಲುಪಬೇಕು. ದೇಶದಲ್ಲಿ 3.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕೊಡುವುದು ಸರ್ಕಾರದ ಧ್ಯೇಯವಾಗಿದೆ. ಗ್ರಾಪಂಗಳಿಂದ ಪ್ರತಿ ಮನೆಗೂ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಬಿಸ್ಸೆಎನ್ನೆಲ್ ಸಂಸ್ಥೆಯ ಅಧಿಕಾರಿಗಳ ಮೇಲಿದೆ ಎಂದರು.

ಸಭೆಯಲ್ಲಿ ಜಿಪಂನ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಬಿಎಸ್‌ಎನ್‌ಎಲ್ ಕರ್ನಾಟಕದ ಭಾರತ್‌ನೆಟ್ ವಿಭಾಗದ ಜನರಲ್ ಮ್ಯಾನೇಜರ್ ಬಿ.ಎಸ್. ನಾಗರ್, ಮಂಗಳೂರಿನ ಜನರಲ್ ಮ್ಯಾನೆಜರ್ ಹೇಮಂತ್, ಎಜೆಎಂ ರಾಜಶೇಖರ್, ಫ್ರಾಂಚೈಸಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಬಿ ಶೆಟ್ಟಿಗಾರ್‌/ವಾರ್ತಾಭಾರತಿ

contributor