ಬೆಂಗಳೂರು - ಮಡಗಾಂವ್ ವಂದೇಭಾರತ್ ರೈಲಿನ ವೇಗ ಹೆಚ್ಚಿಸಲು ಸಂಸದ ಕೋಟ ಮನವಿ
ಉಡುಪಿ, ನ.26: ನೂತನವಾಗಿ ಆರಂಭಗೊಂಡ ಬೆಂಗಳೂರು- ಮಂಗಳೂರು- ಕಾರವಾರ- ಮಡಗಾಂವ್ ವಂದೇ ಭಾರತ್ ರೈಲಿನ ವೇಗವನ್ನು ಸಾಧ್ಯವಿದ್ದೆಡೆ ಹೆಚ್ಚಿಸಿದರೆ ಸುಮಾರು 2 ಗಂಟೆಗಳ ಪ್ರಯಾಣದ ಅವಧಿ ಕಡಿಮೆ ಯಾಗಲಿದೆ. ಆದ್ದರಿಂದ ಘಾಟಿ ಪ್ರದೇಶವನ್ನುಳಿದು ಇತರೆಡೆ ವಿಳಂಬವಾಗುತ್ತಿರುವ ರೈಲ್ವೆ ಸಮಯವನ್ನು ನಿಯಮಾನುಸಾರ ವೇಗಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ದಿ ಸದಸ್ಯರಿಗೆ ಮನವಿ ಸಲ್ಲಿಸಿದರು.
ಈಗ ವಂದೇ ಭಾರತ್ ಪ್ರಯಾಣದ ಒಟ್ಟು ಅವಧಿ 13 ಗಂಟೆಗಳಾಗಿದ್ದು, ವ್ಯರ್ಥ ಸಮಯವನ್ನು ಪ್ರಯಾಣಕ್ಕೆ ಬಳಸಿದರೆ ಬೆಂಗಳೂರು- ಮಡಗಾಂವ್ ರೈಲು 11 ಗಂಟೆಗಳಲ್ಲಿ ಗುರಿ ತಲುಪಲು ಸಾಧ್ಯವಿದೆ ಎಂದು ಅವರು ಕೋಟ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಹೊಸ ವಂದೇ ಭಾರತ್ ಮಧ್ಯಮ ವರ್ಗದ ಪ್ರಯಾಣಿಕರನ್ನು ಆರ್ಕಷಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರಯಾಣದ ವೇಳೆ ಕಡಿಮೆಯಾದರೆ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ವಾಗಲಿದೆ ಎಂದು ಕೋಟ ಪತ್ರದಲ್ಲಿ ತಿಳಿಸಿದ್ದಾರೆ.