‘ಕೃಷಿಕರಿಗೆ, ಕೃಷಿಗೆ ಸಿಗುವ ಎಲ್ಲಾ ಸೌಲಭ್ಯ ಮೀನುಗಾರರಿಗೂ ಸಿಗಲಿ’
ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
ಉಡುಪಿ, ಜ.20: ಮೀನುಗಾರಿಕೆ ಎಂಬುದು ಕೃಷಿಯ ಒಂದು ಭಾಗ. ರೈತರಂತೆ ಮೀನುಗಾರರದು ಕಷ್ಟದ ದುಡಿಮೆ, ಅನಿಶ್ಟಿತ ಬದುಕು. ಹೀಗಾಗಿ ಸರಕಾರ ಕೃಷಿ ಕ್ಷೇತ್ರ ಹಾಗೂ ರೈತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಮೀನುಗಾರಿಕೆ ಹಾಗೂ ಮೀನುಗಾರರಿಗೂ ನೀಡಬೇಕಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಮಂಗಳವಾರ ಕಡಿಯಾಳಿಯ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಮಹತ್ತರಱಱಬದಲಾವಣೆಯಾಗುವ ಮೂಲಕ ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರ ಕೂಡಾ ಬಹುದೊಡ್ಡ ಶಕ್ತಿಯನ್ನು ನೀಡಿದೆ ಎಂದು ಶಾಸಕ ಯಶ್ ಪಾಲ್ ಎ.ಸುವರ್ಣ ಹೇಳಿದರು.
ಕೃಷಿಯಲ್ಲಿ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಿದಂತೆ ಮೀನುಗಳಿಗೂ ಸರಕಾರ ಬೆಂಬಲ ಬೆಲೆ ನೀಡಬೇಕು. ಇದರಿಂದ ಮೀನುಗಾ ರರ ಅನಿಶ್ಚಿತ ಬದುಕಿಗೊಂದು ಆಸರೆ ದೊರೆಯುತ್ತದೆ. ಮೀನುಗಾರಿಕೆಗೆ ಸಂಬಂಧಿಸಿದಂತೆ ಈಗ ಒಂದೊಂದು ರಾಜ್ಯಗಳಲ್ಲಿ ಒಂದೊಂದು ನಿಯಮಗಳಿವೆ. ಪಶ್ಚಿಮ ಕರಾವಳಿಗೆ ಸಂಬಂಧಿಸಿ ದಂತೆ ಎಲ್ಲಾ ರಾಜ್ಯಗಳಿಗೂ ಒಂದೇ ನಿಯಮ ಅನುಷ್ಠಾನಗೊಳಿಸಬೇಕಿದೆ. ಅದೇ ರೀತಿ ರಾಜ್ಯದಲ್ಲಿ ಕರಾವಳಿಗೆ ಪ್ರತ್ಯೇಕ ಮೀನುಗಾರಿಕಾ ನೀತಿಯನ್ನು ತಂದು ಮೀನಿಗೆ ನಿಗದಿತ ದರ ಇರುವಂತಾಗಬೇಕು ಎಂದರು.
ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸರಕಾರಗಳು ಆಗಾಗ ಬದಲಾವಣೆಗೆ, ತಿದ್ದುಪಡಿಗಳನ್ನು ತರುತ್ತಿವೆ. ಇವುಗಳ ಕುರಿತು ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಇಂಥ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಕಾರ್ಯಾಗಾರ ಎಲ್ಲರಿಗೂ ಅತ್ಯಂತ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಗೌರವಿಸ ಲಾಯಿತು.
ಜಿಲ್ಲಾ ಸಹಕಾರಿ ಯೂನಿಯನ್‌ನ ಆಡಳಿತ ಮಂಡಳಿ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಅಲೆವೂರು ಹರೀಶ್ ಕಿಣಿ, ಪ್ರಸಾದ್ ಶೆಟ್ಟಿ, ಸುಧೀರ್ ವೈ, ಬಿ.ಕರುಣಾಕರ ಶೆಟ್ಟಿ, ಬಿ.ಅರುಣ್‌ಕುಮಾರ್ ಹೆಗ್ಡೆ, ಶ್ರೀಧರ ಪಿ.ಎಸ್., ಸುರೇಶ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನಡೆಯಿತು. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಅವರು ಅತಿಥಿ ಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.