ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದ ಕಾಂಗ್ರೆಸ್
ಉಡುಪಿ, ಜ.20: ಜ.18ರ ಮುಂಜಾನೆ ನಗರದ ಜೋಡುಕಟ್ಟೆ ಬಳಿ ನಡೆದ ಶೀರೂರು ಪರ್ಯಾಯದ ಪುರಮೆರವಣಿಗೆ ಸಂದರ್ಭ ಆರೆಸ್ಸೆಸ್ ಧ್ವಜ ಹಿಡಿದು ಹಾರಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಸೆಲ್ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ ಬರೆದಿದೆ.
ಮುಂಜಾನೆ 3:00ಗಂಟೆ ಸುಮಾರಿಗೆ ಮೆರವಣಿಗೆಯ ವೇಳೆ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರ ಕೈಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಆರೆಸ್ಸೆಸ್ ಧ್ವಜ (ಭಗವಾನ್‌ಧ್ವಜ) ಹಸ್ತಾಂತರಿಸಿದ್ದು, ಅವರು ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಪ್ರದರ್ಶಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ್ದರು ಎಂದು ಕಾಂಗ್ರೆಸ್ ಕಾನೂನು ಸೆಲ್‌ನ ಅಧ್ಯಕ್ಷ ಹರೀಶ್ ಶೆಟ್ಟಿ ಜ.19ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದ ಪ್ರತಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೂ ಕಳುಹಿಸಲಾಗಿದೆ.
ಜಿಲ್ಲಾಧಿಕಾರಿಯವರ ಈ ನಡೆ ಸರಕಾರಿ ಸೇವಾ ನಿಯಮಗಳು ಹಾಗೂ ಸಂವಿಧಾನದ ಧರ್ಮ ನಿರಪೇಕ್ಷತೆಯ ತತ್ವಗಳಿಗೆ ವಿರುದ್ಧವಾಗಿದ್ದು, ಈ ರೀತಿಯ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಹರೀಶ್ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸ್ಪಷ್ಟನೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಬೀಸುತ್ತಾ ಮೆರವಣಿಗೆಗೆ ಚಾಲನೆ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗಳು ಕೇಳಿ ಬಂದಾಗ ಸ್ಪಷ್ಟೀಕರಣ ನೀಡಿದ್ದ ಸ್ವರೂಪ ಟಿ.ಕೆ., ತಾನು ಶೀರೂರು ಪರ್ಯಾಯೋತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆ ಯಲ್ಲಿ ಉಡುಪಿ ನಗರಸಭೆಯ ಆಡಳಿತಾಧಿಕಾರಿಯಾಗಿ ಭಾಗವಹಿಸಿ ಚಾಲನೆ ನೀಡಿದ್ದೇನೆ. ಅದೇ ರೀತಿ ನೂತನ ಯತಿಗಳಿಗೆ ಪೌರ ಸನ್ಮಾನ ಹಾಗೂ ಸರ್ವಜ್ಞ ಪೀಠ ಏರಿದ ನಂತರ ನಡೆಯುವ ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು ಯಾವುದೇ ರಾಜಕೀಯ ಪ್ರೇರಿತ ಉದ್ದೇಶ ಅದರಲ್ಲಿ ಇರಲಿಲ್ಲ ಎಂದು ತಿಳಿಸಿದ್ದರು.
ಜಿಲ್ಲಾಧಿಕಾರಿಗೆ ಯಶಪಾಲ್ ಸುವರ್ಣ ಬೆಂಬಲ: ಈ ನಡುವೆ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ಪರ್ಯಾಯ ಮಹೋತ್ಸವವನ್ನು ನಡೆಸಿದ್ದು, ಇದನ್ನು ಸಹಿಸದ ಕೆಲವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ಭಗವಾಧ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ್ದು, ಬಹುಶಃ ಕಾಂಗ್ರೆಸಿಗರು ಅದನ್ನು ಪಾಕಿಸ್ತಾನದ ಧ್ವಜ ಎಂಬ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ಪರ್ಯಾಯ ಮಹೋತ್ಸವ ಅಷ್ಟ ಮಠಾಧೀಶರು ಭಾಗವಹಿಸಿದ್ದ ವೇದಿಕೆಯಾಗಿತ್ತು. ಕಳೆದ ಬಾರಿ ಕೂಡ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಭಗವಾಧ್ವಜದ ಮೂಲಕವೇ ಚಾಲನೆ ನೀಡಿದ್ದರು ಎಂದವರು ಟೀಕೆಗೆ ಉತ್ತರಿಸಿದ್ದಾರೆ.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕೂಡಾ ಭಗವಾಧ್ವಜದ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್ಸಿಗರು ಮಾತನಾಡುವ ರೀತಿ ನೋಡಿದರೆ ಎಲ್ಲೋ ಪಾಕಿಸ್ತಾನದ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ ಎಂಬ ರೀತಿಯಲ್ಲಿ ಟೀಕಿಸುತ್ತಿದ್ದಾರೆ ಎಂದು ಯಶ್ವಾಲ್ ಹೇಳಿದ್ದಾರೆ.