ಗಂಗೊಳ್ಳಿ ಗ್ರಾಮೋತ್ಸವ-2026 ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ, ಜ.16: ಜನರಿಗೆ ಸರಕಾರದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅರ್ಹ ಫಲಾನುಭವಿಗಳಿಗೆ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮದ ಜನರಿಗೆ ಸೇವೆ ನೀಡುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದ್ದಾರೆ.
ಗಂಗೊಳ್ಳಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಮಹಿಳಾ ಮತುತಿ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಗಂಗೋತ್ರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗಂಗೊಳ್ಳಿ ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ-2026ರ ಅಂಗವಾಗಿ ಗಂಗೊಳ್ಳಿಯ ಶ್ರೀವೀರೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆದ ಗಂಗೊಳ್ಳಿ ಗ್ರಾಮೋತ್ಸವ-2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಗಂಗೊಳ್ಳಿಯ ಶ್ರೀವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್ ಉದ್ಘಾಟಿಸಿದರು. ನೋಡೆಲ್ ಅಧಿಕಾರಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾ, ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ ಗಾಣಿಗ, ಕಾರ್ಯದರ್ಶಿ ಅನಿತಾ ಆರ್.ಕೆ., ಗಂಗೋತ್ರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷೆ ಶೋಭಾ, ಗ್ರಾಪಂ ಕಾರ್ಯದರ್ಶಿ ಅನೂಪ್ ಶೇಟ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿ ಗೌರವಿಸಲಾ ಯಿತು. ಪಿಡಿಒ ರವಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ವಂದಿಸಿದರು.