ಗೌರಿಹಬ್ಬಕ್ಕೆ ಮುನ್ನ ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ, ಆ.14: ಕೆಲವು ತಾಂತ್ರಿಕ ಕಾರಣಗಳಿಗಾಗಿ ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಈವರೆಗೆ ಬಿಡುಗಡೆಯಾಗಿರಲಿಲ್ಲ. ಜೂನ್ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದೆ. ಗಣೇಶ-ಗೌರಿ ಹಬ್ಬ ಮೊದಲು ಜೂನ್-ಜುಲೈ ತಿಂಗಳ ಹಣ ಎಲ್ಲರ ಖಾತೆಗೂ ಸಂದಾಯವಾಗಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಪೊಲೀಸ್ ಇಲಾಖೆಯ ಸಿಸಿಟಿವಿಯ ಶ್ಯೇನ ದೃಷ್ಟಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಈವರೆಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆಯಾಗಿರಲಿಲ್ಲ. ಈಗ ಆ ಹಣವನ್ನ ಬಿಡುಗಡೆ ಮಾಡಿ ಉಡುಪಿಗೆ ಬಂದಿದ್ದೇನೆ. ಹಣ ಬಿಡುಗಡೆಯಾಗಿ ಸರಿಸುಮಾರು ಐದಾರು ದಿನಗಳಾಗಿವೆ. ಜೂನ್ ತಿಂಗಳಿನ ಬಾಕಿ ಹಣ ಸಂದಾಯವಾಗಿದೆ. ಜುಲೈ ಹಣ ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಬರಲಿದೆ. ಮುಂದಿನ ಗಣೇಶ ಚತುರ್ಥಿಯ ಒಳಗೆ ಗೃಹಲಕ್ಷ್ಮಿಯ ಜುಲೈ ತಿಂಗಳ ಹಣ ಬಿಡುಗಡೆ ಮಾಡಬೇಕೆನ್ನುವ ಆಸೆ ಇದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಏಳು ಸಹಚರರ ಜಾಮೀನನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಸಚಿವರು, ನ್ಯಾಯಾಲಯ ತೀರ್ಪು ಕೊಟ್ಟ ನಂತರ ನಾವೆಲ್ಲರೂ ಅದಕ್ಕೆ ತಲೆಬಾಗಲೇಬೇಕು. ಸಂವಿಧಾನದಲ್ಲಿ ವಿಶ್ವಾಸ ಇರಿಸಿಕೊಂಡಿರುವ ನಾವೆಲ್ಲರೂ ತೀರ್ಪಿಗೆ ತಲೆಬಾಗುತ್ತೇವೆ ಎಂದರು.
ಇತ್ತೀಚೆಗೆ ಸಂಪುಟದಿಂದ ಕೈಬಿಟ್ಟಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರನಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಆದರೆ ನಮ್ಮ ಪಕ್ಷ ಹೈಕಮಾಂಡ್ ಇರುವ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದೇ ಫೈನಲ್ ಎಂದು ಹೇಳಿದರು.