ದೇಶದಲ್ಲಿ 50 ಲಕ್ಷ ನುರಿತ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಕೊರತೆ: ಸಚಿವ ಶ್ರೀಪಾದ್ ನಾಯಕ್
ಉಡುಪಿ, ಜ.15: ಪ್ರಸಕ್ತ ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ 50 ಲಕ್ಷ ಹಾಗೂ ಕರ್ನಾಟಕದಲ್ಲಿ 30 ಸಾವಿರ ತರಬೇತಿ ಪಡೆದ ನುರಿತ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಕೊರತೆ ಇದೆ. ಈ ವಾಸ್ತಾವಾಂಶ ಪ್ಯಾರಾ ಮೆಡಿಕಲ್ ನಲ್ಲಿನ ಅವಕಾಶ ಮತ್ತು ಬೇಡಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.
ಉಡುಪಿ ನೇತ್ರಜ್ಯೋತಿ ಕಾಲೇಜಿನಲ್ಲಿ ಗುರುವಾರ ನಡೆದ ಸಂಸ್ಥೆಯ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಘಟಿಕೋತ್ಸವವನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಈ ಕ್ಷೇತ್ರದಲ್ಲಿರುವ ಸಿಬ್ಬಂದಿಯ ಕೊರತೆಯನ್ನು ನೇತ್ರಜ್ಯೋತಿಯಂತಹ ಸಂಸ್ಥೆಗಳು ನೀಗಿಸುವ ಕಾರ್ಯ ಮಾಡುತ್ತಿದೆ ಎಂದ ಅವರು, ಪ್ಯಾರಾ ಮೆಡಿಕಲ್ ವೃತ್ತಿ ಎಂಬುದು ಆರೋಗ್ಯ ಕ್ಷೇತ್ರದ ಬೆನ್ನೆಲುಬು ಆಗಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿ ತಮ್ಮ ಸೇವೆಯಲ್ಲಿ ಶಿಸ್ತು, ವಿನಯವನ್ನು ಅಳವಡಿಸಿಕೊಳ್ಳಬೇಕು. ಪ್ಯಾರಾ ಮೆಡಿಕಲ್ ಆರೋಗ್ಯ ರಕ್ಷಣೆಯ ಸೇವೆಗೆ ನಮ್ಮಲ್ಲಿ ಅತ್ಯುತ್ತಮ ಸ್ಥಾನ ಇದೆ. ಸೇವೆ ಎಂಬುದು ಅತ್ಯಂತ ಪ್ರಮುಖ ಕರ್ತವ್ಯವಾಗಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕರ್ನಾಟಕ ಸ್ಟೇಟ್ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಮುಖ್ಯ ಅತಿಥಿಗಳಾಗಿದ್ದರು.
ಶ್ರೀಮತಿ ವೀಣಾ ರಘುರಾಮ್ ರಾವ್ ದತ್ತಿ ಪ್ರಶಸ್ತಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಘುರಾಮ್ ರಾವ್, ನೇತ್ರಜ್ಯೋತಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೌರಿಪ್ರಭು ಉಪಸ್ಥಿತರಿದ್ದರು.
ಕಾಲೇಜಿನ ಸ್ಥಾಪಕ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ರಶ್ಮಿ ಕೃಷ್ಣ ಪ್ರಸಾದ್ ವರದಿ ವಾಚಿಸಿದರು. ಶ್ರೀನಿಧಿ ಹಾಗೂ ಆಯಿಶ ಕಾರ್ಯಕ್ರಮ ನಿರೂಪಿಸಿದರು.