×
Ad

‘ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಗಳು’ ಮಾಹಿತಿ ಶಿಬಿರ

Update: 2026-02-03 18:56 IST

ಉಡುಪಿ, ಫೆ.3: ಮಾದಕ ವಸ್ತುಗಳ ಸೇವನೆ ಈಗ ವಿರಾಟ್ ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಅಪಾಯಕರ ರೀತಿ ಯಲ್ಲಿ ಹೆಚ್ಚುತ್ತಿರುವ ಈ ಪ್ರಸಕ್ತ ಸಂದರ್ಭದಲ್ಲಿ ಅಮಲು ಪದಾರ್ಥಗಳ ಸೇವನೆಯು ಕೇವಲ ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆ ಮಾತ್ರವಲ್ಲ ಒಂದು ದೇಶದ ಯುವ ಜನಾಂಗ ಎದುರಿಸುತ್ತಿರುವ ಅತ್ಯಂತ ಭೀಕರ ಸಮಸ್ಯೆಯಾಗಿದೆ ಎಂದು ರೋಟರಿ ಮಿಡ್‌ಟೌನ್ ಅಧ್ಯಕ್ಷ ಪಿ.ರಾಘವೇಂದ್ರ ಭಟ್ ಹೇಳಿದ್ದಾರೆ.

ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್, ರೋಟರಿ ಉಡುಪಿ ಮಿಡ್‌ಟೌನ್ ಹಾಗೂ ಕುಕ್ಕೆಹಳ್ಳಿ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಕುಕ್ಕೆಹಳ್ಳಿ ಗ್ರಾಪಂ ಅಧ್ಯಕ್ಷ ಪುರಂದರ ಕೋಟ್ಯಾನ್ ಮಾತನಾಡಿ, ವ್ಯಕ್ತಿಗಳ ನಡುವಿನ ಮನಸ್ತಾಪಗಳು, ಹಲವು ಬಗೆಯ ನೋವು ನಿರಾಶೆಗಳು, ಹಣಕಾಸಿನ ಮುಗ್ಗಟ್ಟು ಉದ್ಯೋಗದಲ್ಲಿನ ಸಮಸ್ಯೆ, ಲೈಂಗಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡದಿಂದ ವಿಮುಖರಾಗಲು, ಮಾದಕ ವಸ್ತುಗಳ ಸೇವನೆ ಮಾಡುತ್ತ ಅದನ್ನೇ ಚಟವಾಗಿ ಬೆಳೆಸಿಕೊಂಡು ಅದರ ದಾಸಾನು ದಾಸರಾಗುತ್ತಾರೆ. ಅದನ್ನು ತಡೆಗಟ್ಟಲು ಇಂತಹ ಮಾಹಿತಿ ವಿದ್ಯಾರ್ಥಿ ದೆಸೆಯಿಂದಲೇ ಎಚ್ಚರಿಸಿದಾಗ ಅವರು ಮುಂದೆ ದುಶ್ಚಟಕ್ಕೆ ಬಲಿಯಾಗದೇ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ತರಬೇತಿದಾರ ಹಾಗೂ ಉಪನ್ಯಾಸಕಿ ಅನಿತಾ ನರೇಂದ್ರ ಕುಮಾರ್ ಮಾದಕ ವಸ್ತುಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ರವೀಂದ್ರ ವಹಿಸಿದ್ದರು.

ವೇದಿಕೆಯಲ್ಲಿ ರೋಟರಿ ಉಡುಪಿ ಮಿಡ್‌ಟೌನ್ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಎಲ್., ಎಸ್.ಡಿ.ಎಂ.ಸಿ. ಸದಸ್ಯ ವಿಶ್ವನಾಥ ಬೆಳಂಪಳ್ಳಿ ಹಾಗೂ ದೈಹಿಕ ಶಿಕ್ಷಕ ಗಣೇಶ್ ಉಪಸ್ಥಿತರಿದ್ದರು. ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿ, ಸುಧಾ ಭಟ್ ಅಮಾಸೆಬೈಲು ವಂದಿಸಿದರು. ಸುಮಾರು 93 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News