×
Ad

ಮರಳು, ಕಲ್ಲು ಸಾಗಾಟದ ಟಿಪ್ಪರ್‌ಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ: ಉಡುಪಿ ಎಸ್ಪಿ ಹರಿರಾಂ ಶಂಕರ್

"ನಿಯಮ ಪಾಲನೆಗಾಗಿ ಲಾರಿ ಚಾಲಕ - ಮಾಲಕರಿಗೆ 10 ದಿನಗಳ ಕಾಲಾವಕಾಶ"

Update: 2026-01-07 17:53 IST

ಉಡುಪಿ, ಜ.7: ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿತ ಸಲಕರಣೆಗಳನ್ನು ಸಾಗಾಟ ಮಾಡುವ ವಾಹನಗಳು ಅತೀವೇಗದಿಂದ ಚಲಾಯಿಸಿಕೊಂಡು ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಆ ವಾಹನಗಳಿಗೆ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್(ವೇಗನಿಯಂತ್ರಕ) ಕಡ್ಡಾಯವಾಗಿ ಅಳವಡಿಸುವ ಕುರಿತು ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿಸಿ ಮರಳು, ಮಣ್ಣು, ಕಲ್ಲು ಸೇರಿದಂತೆ ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಗರಿಷ್ಠ 60 ಕಿ.ಮೀ ವೇಗ ಮಿತಿಯ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ವಾಹನಗಳು ಅತೀಯಾದ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ನಿರಂತರ ವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಆದುದರಿಂದ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಈ ನಿಯಮ ಪಾಲನೆಗಾಗಿ ಎಲ್ಲಾ ಲಾರಿ ಚಾಲಕ ಮಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ವಿಚಾರವಾಗಿ ಚಾಲಕರಿಗೆ ಯಾವುದೇ ಮಾಹಿತಿ ಕೊರತೆಯಾಗದಂತೆ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಅದೇ ರೀತಿ ಬಸ್‌ಗಳಲ್ಲಿ ಬಾಗಿಲು ಅಳವಡಿಕೆ ಸಂಬಂಧಿಸಿದಂತೆ ಜ.20 ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದ ನಂತರ ಬಾಗಿಲು ಇಲ್ಲದ ಬಸ್‌ಗಳಿಗೆ ದಂಡ ವಿಧಿಸಲಾಗುವುದು ಅಥವಾ ಬಸ್‌ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News