×
Ad

ಸಂವಿಧಾನದಿಂದಲೇ ದೇಶ ಒಗ್ಗಟ್ಟಿನಲ್ಲಿ ಮುಂದುವರೆಯಲು ಸಾಧ್ಯವಾಗಿದೆ: ಎಸಿ ರಶ್ಮಿ

Update: 2023-08-15 18:41 IST

ಕುಂದಾಪುರ, ಆ.15: ಈಸ್ಟ್ ಇಂಡಿಯಾ ಕಂಪೆನಿ ವ್ಯಾಪಾರಕ್ಕಾಗಿ ಬಂದು ನಮ್ಮ ಇಡೀ ದೇಶವನ್ನು ಸಂಪೂರ್ಣವಾಗಿ ಲೂಟಿ ಹೊಡೆದಿತ್ತು. ಆ ಸಮಯ ದಲ್ಲಿ ನಮ್ಮೊಳಗೆ ಒಗ್ಗಟ್ಟಿಲ್ಲದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಐಕ್ಯತೆಯಿಂದ, ದೇಶಾಭಿಮಾನದಿಂದ ಹಿರಿಯರು ಮಾಡಿದ ಹೋರಾಟ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದ್ದಾರೆ.

ಕುಂದಾಪುರ ತಾಲೂಕು ಆಡಳಿತ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಮಂಗಳವಾರ ಜರುಗಿದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಅವರು ಸಂದೇಶ ನೀಡಿದರು. ನಮ್ಮ ದೇಶಕ್ಕೆ ಬಲಿಷ್ಠ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ನೀಡಿದ್ದಾರೆ. ಅವರು ಹಾಕಿಕೊಟ್ಟ ಸಂವಿಧಾನದಿಂದಲೇ ನಮ್ಮ ದೇಶ ಒಗ್ಗಟ್ಟಿನಲ್ಲಿ ಮುಂದುವರೆ ಯಲು ಸಾಧ್ಯವಾಗಿದೆ. ಆರ್ಥಿಕ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ನಾವು ಬಹಳಷ್ಟು ಸಾಧನೆ ಮಾಡಿದ್ದೇವೆ ಎಂದರು.

ಶಾಂತಿ ಮತ್ತು ಅಹಿಂಸೆ ತತ್ವದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದೇ ದ್ಯೇಯವನ್ನು ದಿನನಿತ್ಯವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಭಾರತದ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದ ಅವರು, ಪ್ರತಿಯೊಬ್ಬ ಸರಕಾರಿ ಅಧಿಕಾರಿಯೂ ನಿಮ್ಮ ನಿಮ್ಮ ಕಚೇರಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಆದಷ್ಟು ಸಹಾಯ ಮಾಡಬೇಕು. ಆ ವ್ಯಕ್ತಿ ನಿಮ್ಮ ಕಚೇರಿಯಿಂದ ಮರಳುವಾಗ ನಗುಮೊಗದಿಂದ ತೃಪ್ತಿಕರವಾಗಿ ಹೋಗಬೇಕು. ಹೀಗೆಯೇ ಪ್ರತಿಯೊಬ್ಬರು ಮಾಡಿದರೆ ಆಡಳಿತದ ಪರವಾಗಿ ಉತ್ತಮ ವಾತಾವರಣ ಸೃಷ್ಠಿಸಲು ಸಾಧ್ಯ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. 2022-23 ನೇ ಸಾಲಿನ ಎಸೆಸೆಲ್ಸಿಯಲ್ಲಿ ತಾಲೂಕಿಗೆ ಗರಿಷ್ಠ ಅಂಕ ಪಡೆದ ಲಹರಿ ದೇವಾಡಿಗ, ಪ್ರಥಮ್ ತಾಳಿಕೋಟೆ, ಕೊರಗ ವಿದ್ಯಾರ್ಥಿ ಸುಜಯ್ ಅವರನ್ನು ಸನ್ಮ್ಮಾನಿಸಲಾಯಿತು. ತಾಳೆ ಬೆಳೆ ಯೋಜನೆಯಡಿ ರೈತರಿಗೆ ತಾಳೆ ಗಿಡಗಳನ್ನು ವಿತರಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಡಿವೈಎಸ್ಪಿಬೆಳ್ಳಿಯಪ್ಪ ಕೆ.ಯು., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಹಾದಿಮನೆ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಭಾಗ್ಯ ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶೋಭಾ ಶೆಟ್ಟಿ ಸ್ವಾಗತಿಸಿ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ ದರು. ಪೊಲೀಸ್ ತಂಡ, ಗೃಹ ರಕ್ಷಕದಳ, ಕುಂದಾಪುರದ ವಿವಿಧ ಶಾಲೆಗಳ ಎನ್ಸಿಸಿ, ಸ್ಕೌಟ್-ಗೈಡ್ಸ್ ತಂಡಗಳು ಹಾಗೂ ಪೌರ ಕಾರ್ಮಿಕರ ತಂಡ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ಜರಗಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News