ಜ.24-26: ಬೈಂದೂರಿನಲ್ಲಿ ‘ಬೈಂದೂರು ಉತ್ಸವ’ ಆಯೋಜನೆ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಉಡುಪಿ, ಡಿ.5: ಗ್ರಾಮೀಣ ಭಾಗದ ಜನರಿಗೆ ಸರಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದ ಮುಂದಿನ ಜ.24ರಿಂದ 26ರವರೆಗೆ ಬೈಂದೂರಿನಲ್ಲಿ ‘ಬೈಂದೂರು ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೈಂದೂರು ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೂರು ದಿನಗಳ ಈ ಉತ್ಸವದಲ್ಲಿ ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿಗಳನ್ನು ಪ್ರದರ್ಶಿಸುವುದರೊಂದಿಗೆ, ಗ್ರಾಮೀಣ ಭಾಗದ ಜನರಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೈಂದೂರು ಉತ್ಸವ ಜ.24ರಿಂದ 26ರವರೆಗೆ ಬೈಂದೂರಲ್ಲಿ ನಡೆಯಲಿದೆ. ಉತ್ಸವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಜನಸಾಮಾನ್ಯರಿಗೆ ತಲುಪುವಂತೆ ಮಾಡುವುದು ಇಲಾಖೆಗಳ ಜವಾಬ್ದಾರಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಸಂಜೀವಿನಿ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವೂ ಉತ್ಸವದಲ್ಲಿ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ 43 ಗ್ರಾಪಂಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸ್ಥಳೀಯ ಕ್ರೀಡಾಕೂಟ, ಜನಪದ-ಕಲೆ, ಆರೋಗ್ಯ ಮೇಳದ ಜೊತೆಗೆ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಸೌಲಭ್ಯಗಳ ಮಾಹಿತಿ ನೀಡಿದ್ದಲ್ಲಿ ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗಗಳಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗಲಿದೆ. ಇಲಾಖೆಯ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದವರು ವಿವರಿಸಿದರು.
ಉತ್ಸವದಲ್ಲಿ ವಸ್ತು ಪ್ರದರ್ಶನಕ್ಕೆ ಇಲಾಖೆಗಳಿಗೆ ಸ್ಥಳಾವಕಾಶ ಒದಗಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಗಳು ಉತ್ಸವದಲ್ಲಿ ಭಾಗವಹಿಸಿ, ತಮ್ಮ ಇಲಾಖೆಗಳ ಯೋಜನೆಯನ್ನು ಆಕರ್ಷಕವಾಗಿ, ಜನಸಾಮಾನ್ಯರಿಗೆ ತಲುಪುವಂತೆ ಪ್ರದರ್ಶಿಸಬೇಕು ಎಂದ ಅವರು, ಗ್ರಾಮೋತ್ಸವ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಆರೋಗ್ಯ ಶಿಬಿರಗಳನ್ನು ನಡೆಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ಕ್ಷೇತ್ರದ ಪ್ರವಾಸೋದ್ಯಮ ಅವಕಾಶಗಳನ್ನು ಪರಿಚಯಿಸುವುದರೊಂದಿಗೆ ಅದಕ್ಕೆ ಇನ್ನಷ್ಟು ಉತ್ತೇಜನ ಸಿಗುವಂತಾಗಬೇಕು. ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಹೆಚ್ಚು ಹೆಚ್ಚು ಹೂಡಿಕೆದಾರರನ್ನು ಸೆಳೆಯುವಂತೆ ಮಾಡುವ ಉದ್ದೇಶದಿಂದ ಈ ಬೈಂದೂರು ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.
ಇದು ಕೇವಲ ಉತ್ಸವ ಆಗಿರದೇ, ಸಮಗ್ರ ಮಾಹಿತಿ ದೊರೆಯುವ ಕಾರ್ಯಕ್ರಮವೂ ಆಗಿರಲಿದೆ. ಕ್ಷೇತ್ರದ ವಿಶೇಷತೆ, ಗ್ರಾಮೀಣ ಸೊಗಡು, ಆಹಾರೋತ್ಪನ್ನಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು, ಕಲಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲವೂ ಉತ್ಸವದಲ್ಲಿ ಇರಲಿದೆ ಎಂದರು.
ಉತ್ಸವದಲ್ಲಿ ಬೈಂದೂರಿನ ಪ್ರೇಕ್ಷಣೀಯ ಸ್ಥಳಗಳು, ಸ್ಥಳೀಯ ಧಾರ್ಮಿಕ ಕ್ಷೇತ್ರಗಳ ವೀಡಿಯೋಗಳನ್ನು ಪ್ರದರ್ಶಿಸಬೇಕು. ಉತ್ಸವದ ದಿನಗಳಂದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಂಗ್ರಹವಾಗುವ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.
ಉದ್ಯೋಗ, ಆರೋಗ್ಯ, ಕೃಷಿ, ಆಹಾರ, ಜ್ಞಾನ, ಕರಕುಶಲ, ಶಿಕ್ಷಣ ಮೇಳಗಳು, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಕರಾವಳಿಯ ಖಾದ್ಯಗಳು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಈ ಉತ್ಸವದಲ್ಲಿ ಇರಲಿವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ವತಿಯಿಂದ ಆಯೋಜಿಸಲಾಗುವ ವಸ್ತು ಪ್ರದರ್ಶನಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿಎಫ್ಓ ಗಣಪತಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿ ಗಳು ಉಪಸ್ಥಿತರಿದ್ದರು.