×
Ad

ಉಡುಪಿ | ಇಎಸ್ಐ, ಇಪಿಎಫ್ ಸೌಲಭ್ಯದಿಂದ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ : ಜಿಪಂ ಸಿಇಓ ಪ್ರತೀಕ್ ಬಾಯಲ್

Update: 2025-12-05 19:54 IST

ಉಡುಪಿ, ಡಿ.5: ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಿಷ್ಯನಿಧಿ ಸಂಸ್ಥೆಯು, ಉದ್ಯೋಗಿಗಳಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಸಿಬ್ಬಂದಿಗಳಾದ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರ ವಸೂಲಿಗಾರ, ಪಂಪು ಚಾಲಕ, ಜವಾನ, ಸ್ವಚ್ಛತಾಗಾರ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಇಎಸ್ಐ ಮತ್ತು ಇಪಿಎಫ್ ಸೌಲಭ್ಯದ ಕುರಿತಂತೆ ಶುಕ್ರವಾರ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಸುತ್ತಿರುವ ಪ್ರತಿಯೊಬ್ಬ ನೌಕರರಿಗೂ ಆರ್ಥಿಕ ಸೌಲಭ್ಯವನ್ನು ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಒದಗಿಸುತ್ತಿವೆ. ಇವುಗಳ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದವರು ನುಡಿದರು.

ಉದ್ಯೋಗಿಗಳ ರಾಜ್ಯ ವಿಮೆ (ಇಎಸ್ಐ) ಯೋಜನೆಯಡಿ ಅನಾರೋಗ್ಯ, ಅಂಗವೈಕಲ್ಯ ಸೇರಿದಂತೆ ಅಸ್ವಾಸ್ಥ್ಯದ ವಿವಿಧ ಸಂದರ್ಭಗಳಲ್ಲಿ ಕಾರ್ಮಿಕರಿಗೆ ವೈದ್ಯಕೀಯ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದೆ. ಈ ಎಲ್ಲಾ ಮಾಹಿತಿಗಳ ಬಗ್ಗೆ ಅರಿವು ಮೂಡಿಸಲು ಇಎಸ್ಐ ಹಾಗೂ ಇಪಿಎಫ್ಓ ಖಾತೆದಾರರಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಸದುಪಯೋಗ ಎಲ್ಲಾ ಸಿಬ್ಬಂದಿಗಳು ಪಡೆದುಕೊಳ್ಳುವಂತೆ ತಿಳಿಸಿದರು.

ಇಎಸ್ಐ ಹಾಗೂ ಇಪಿಎಫ್ಓ ಯೋಜನೆಯ ನಿಯಮಾವಳಿಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತವೆ. ಇವುಗಳಿಂದ ದೊರಕುವ ಸೌಲಭ್ಯ ಗಳನ್ನು ಬಳಸುವ ಬಗ್ಗೆ ಪ್ರತಿಯೊಬ್ಬ ಖಾತೆದಾರರು ಸಮಗ್ರ ಮಾಹಿತಿ ಹೊಂದಿರಬೇಕು ಎಂದ ಪ್ರತೀಕ್ ಬಾಯಲ್, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಮತ್ತು ಇಪಿಎಫ್ ಸೌಲಭ್ಯಗಳ ಕುರಿತಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಮುಖ್ಯ ಯೋಜನಾಧಿಕಾರಿ ಉದಯ್ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಗ್ರಾಮಪಂಚಾಯತ್ ಸಿಬ್ಬಂದಿಗಳು ಸದೃಢರಾಗಿದ್ದಾಗ ಮಾತ್ರ ಗ್ರಾಪಂಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಪಂ ಸಿಬ್ಬಂದಿಗಳ ಒಳಿತಿಗಾಗಿ ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಿಪಂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಪಂ ಸಿಬ್ಬಂದಿಗಳು ಇಎಸ್ಐ ಹಾಗೂ ಇಪಿಎಫ್ಓ ಯೋಜನೆಗಳ ಮಾಹಿತಿ ಪಡೆದಾಗ ಮಾತ್ರ ಅದರ ಲಾಭ ಸಮರ್ಪಕವಾಗಿ ದೊರಕುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್.ಕಾದ್ರೊಳ್ಳಿ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಪಂ ಸಿಬ್ಬಂದಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬ ಸಿಬ್ಬಂದಿಯೂ ಪಡೆಯುವಂತಾಗಬೇಕು ಎಂದರು.

ಜಿಲ್ಲಾ ಇ.ಪಿ.ಎಫ್.ಓ ಎನ್ಫೋರ್ಸ್ಮೆಂಟ್ ಆಫೀಸರ್ ಸಂತೋಷ್ ಅವರು ಇಪಿಎಫ್ಓ ಯೋಜನೆಯ ಬಗ್ಗೆ ಹಾಗೂ ಇಎಸ್ಐ ಸೌಲಭ್ಯದ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನಿಟ್ಟೂರು ಎನ್ಸಿಹೆಚ್ಆರ್ ಸೊಲ್ಯೂಷನ್ಸ್ ನ ಮಾನವ ಸಂಪನ್ಮೂಲ ಸಲಹೆಗಾರ ನವೀನಚಂದ್ರ, ಜಿಲ್ಲೆಯ ವಿವಿಧ ಗ್ರಾಪಂಗಳ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರವಸೂಲಿಗಾರರು, ಪಂಪುಚಾಲಕರು, ಜವಾನರು, ಸ್ವಚ್ಛತಾಗಾರರು, ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ ಸ್ವಾಗತಿಸಿ, ಪಿಡಿಓ ಅನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು. ರವಿರಾಜ್ ವಂದಿಸಿದರು.

‘ನೌಕರರ ಭವಿವಷ್ಯನಿಧಿ ಯೋಜನೆಯಲ್ಲಿ ಮುಂಗಡ ಪಡೆಯುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಖಾತೆದಾರರು ಒಂದು ವರ್ಷದ ಸೇವೆಯ ನಂತರ ಮನೆ ನಿರ್ಮಾಣ, ಉನ್ನತ ಶಿಕ್ಷಣ, ಮದುವೆ, ಅನಾರೋಗ್ಯ ಸೇರಿದಂತೆ ಇತರೆ ಕಾರಣಗಳಿಗೆ ಮುಂಗಡ ಆರ್ಥಿಕ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.’

-ಪ್ರತೀಕ್ ಬಾಯಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಪಂ ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News