ಕಾಪು | ಮನೆಗೆ ನುಗ್ಗಿ 3.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಕಾಪು, ಡಿ.5: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಲ್ಲಾರು ಎಂಬಲ್ಲಿ ಡಿ.4ರಂದು ಬೆಳಗ್ಗೆ ನಡೆದಿದೆ.
ಪಾದೂರಿನಲ್ಲಿರುವ ಐಎಸ್ಪಿಆರ್‌ಎಲ್‌ನಲ್ಲಿ ಹೌಸ್ ಕೀಪರ್ ಆಗಿರುವ ಮಲ್ಲಾರಿನ ರಾಘವೇಂದ್ರ ಕಿಣಿ ಎಂಬವರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ನಂತರ ಇವರ ಪತ್ನಿ ಮಕ್ಕಳ ಶಾಲಾ ವಾರ್ಷಕೋತ್ಸವ ಕಾರ್ಯಕ್ರಮಕ್ಕೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿ ಹೋಗಿದ್ದರು.
ಈ ವೇಳೆ ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀಯಿಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳರು, ಬೆಡ್ರೂಂನ ಕಪಾಟಿನಲ್ಲಿದ್ದ 28 ಗ್ರಾಂ ತೂಕದ ಹವಳದ ಸರ, 8ಗ್ರಾಂ ತೂಕದ ಚಿನ್ನದ ಚೈನ್, 10 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 8 ಗ್ರಾಂ ತೂಕದ ಉಂಗುರ ಮತ್ತು ಚಿಕ್ಕ ಮಕ್ಕಳ 2 ಉಂಗುರ, 8 ಗ್ರಾಂ ತೂಕದ ಒಂದು ಜೊತೆ ಕಿವಿಯ ಜುಮುಕಿ ಮತ್ತು ಬೆಂಡೋಲೆೆ, 8ಗ್ರಾಂ ತೂಕದ ಕೂರ್ಗಿಸ್ ಚೈನ್, ಬೆಳ್ಳಿಯ ಬಟ್ಟಲು, 2 ಬೆಳ್ಳಿ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಒಟ್ಟು 72 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 3,90,000 ರೂ. ಹಾಗೂ ಬೆಳ್ಳಿಯ ಸೊತ್ತುಗಳ ಮೌಲ್ಯ 1,500 ರೂ. ಎಂದು ಅಂದಾಜಿಸ ಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.