×
Ad

ಉಡುಪಿ ಜಿಲ್ಲೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಕಾ ಕೇಂದ್ರ: ಡಾ.ಬಿಳಿಮಲೆ

Update: 2025-07-22 20:27 IST

ಉಡುಪಿ, ಜು.22: ಜಿಲ್ಲೆಯಲ್ಲಿ ಶಿಕ್ಷಣ ಸೇರಿದಂತೆ ಉದ್ಯೋಗ ಅರಸಿ ಬರುವ ಹೊರರಾಜ್ಯಗಳ ಕನ್ನಡೇತರರಿಗೆ ಕನ್ನಡ ಕಲಿಯಲು ಉತ್ಸಾಹಕರಾ ಗಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ‘ಕನ್ನಡ ಕಲಿಕಾ ಕೇಂದ್ರ’ ಗಳನ್ನು ತೆರೆದು ಕನ್ನಡವನ್ನು ಕಲಿಸಿ ಕೊಡುವ ಕಾರ್ಯ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಪಾಧಿಕಾರದ ವತಿಯಿಂದ ನಡೆದ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಕಲಿಕಾ ಕೇಂದ್ರಗಳು ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆ ನಡೆಸುವ ಮೂಲಕ ಕನ್ನಡ ಅನುಷ್ಟಾನಕ್ಕೆ ಮುಂದಾಗಬೇಕು ಎಂದರು.

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಉಳಿವಿಗಾಗಿ ಅಧಿಕಾರಿಗಳು ಹೆಚ್ಚು ಸಂವೇದನಾಶೀಲರಾಗಿ ಕೆಲಸ ಮಾಡಬೇಕು. ಸರಕಾರ ಕನ್ನಡ ಭಾಷೆ ಅನುಷ್ಠಾನಕ್ಕೆ ಅನೇಕ ಅದೇಶ ಗಳನ್ನು ಹೊರಡಿಸಿದೆ. ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದ ಡಾ.ಬಿಳಿಮಲೆ, ಕನ್ನಡ ಭಾಷೆಯನ್ನು ಆಡಳಿತದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಕರಾವಳಿ ಜಿಲ್ಲೆಗಳಲ್ಲಿ ಆಡಳಿತದಲ್ಲಿ ಕನ್ನಡದ ಬಳಕೆ, ಅನುಷ್ಠಾನ ಉತ್ತಮವಾಗಿದೆ. ಆದರೂ ಅಡಳಿತದಲ್ಲಿ ಕನ್ನಡ ಭಾಷೆಯು ಪ್ರತಿಶತಃ ನೂರರಷ್ಟು ಅನುಷ್ಠಾನಗೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕನ್ನಡ ಭಾಷೆಯ ಬಳಕೆ ನಿರಂತರವಾಗಿರಲು, ಕನ್ನಡ ಭಾಷೆ ಹೆಚ್ಚು ಪ್ರಚಲಿತದಲ್ಲಿ ರಲು ಅಧಿಕಾರಿಗಳು ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

3 ತಿಂಗಳಿಗೊಮ್ಮೆ ಸಭೆ: ಜಿಲ್ಲಾಡಳಿತವು ಕನ್ನಡ ಪರ ಸಂಘಟನೆಗಳೊಂದಿಗೆ ಕನಿಷ್ಠ ಮೂರು ತಿಂಗಳಿ ಗೊಮ್ಮೆ ಸಭೆಯನ್ನು ನಡೆಸುವುದರೊಂದಿಗೆ ಕನ್ನಡ ಭಾಷಾ ಅನುಷ್ಠಾನದ ಸಮಸ್ಯೆಗಳ ಕುರಿತು ಚರ್ಚಿಸಿ, ಕಾನೂನಾತ್ಮಕವಾಗಿ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದ ಅಧ್ಯಕ್ಷರು, ಕನ್ನಡ ಭಾಷೆ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆಗಳ ಸದಸ್ಯರ ಮೇಲೆ ಹಾಕಿರುವ ಪ್ರಕರಣಗಳನ್ನು ಸರಕಾರ ವಾಪಾಸು ಪಡೆಯಲು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದರು.

ಜಿಲ್ಲೆಯ ಮಲ್ಪೆ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಶಸ್ತ್ಯ ಮನ್ನಣೆ ದೊರೆತಿದ್ದರೂ ವಾಣಿಜ್ಯ ಕಟ್ಟಡಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆ ನಿಯಮಾನುಸಾರ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿ ಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲೆಯ ಐತಿಹಾಸಿಕ ಪ್ರಸಿದ್ದ ಪ್ರವಾಸಿ ತಾಣಗಳ ವಿವರಗಳನ್ನು ಕನ್ನಡ ಭಾಷೆಯಲ್ಲಿ ಪ್ರದರ್ಶಿಸುವ ಕಾರ್ಯ ನಡೆಯಬೇಕು ಎಂದರು.

ನಾಮಫಲಕದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ: ಜಿಲ್ಲೆಯ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಕನ್ನಡಕ್ಕೆ ಶೇ.60ರಷ್ಟು ಹಾಗೂ ಇತರೆ ಭಾಷೆಗಳಿಗೆ ಶೇ.40ರಷ್ಟು ಪ್ರಾಶಸ್ತ್ಯವಿರಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿಯೇ ಈ ಬಗ್ಗೆ ಪರಿಶೀಲಿಸಿ ಅನುಮತಿ ನೀಡ ಬೇಕು. ಇವುಗಳ ಜೊತೆಗೆ ಮಣಿಪಾಲ ಹಾಗೂ ಇತರೆಡೆ ಆಗಿಂದಾಗ್ಗೆ ನಾಮಫಲಕಗಳ ಪರಿಶೀಲನೆ ಮಾಡಲು ಕ್ರಮವಹಿಸಬೇಕು ಎಂದೂ ಡಾ. ಬಿಳಿಮಲೆ ನುಡಿದರು.

ಪ್ರಾಥಮಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದ ಅವರು, ಕೆಲವು ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯ ಅಕ್ಷರಗಳನ್ನು ಗುರುತಿಸಲು ವಿಫಲವಾಗುವ ಸ್ಥಿತಿ ಇದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇಂಥ ಸ್ಥಿತಿ ಇಲ್ಲ. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನಿ ಯಾಗಿದೆ. ಅಲ್ಲದೇ ಇಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಕಡಿಮೆ ಮಂದಿ ಅನುತ್ತೀರ್ಣರಾಗಿದ್ದಾರೆ.ಆದರೆ ಕನ್ನಡ ಮಾತೃಭಾಷೆಯ ಕೆಲವು ವಿದ್ಯಾರ್ಥಿ ಗಳು ಅನುತ್ತೀರ್ಣರಾಗಿದ್ದು, ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದರು.

ಆಸ್ಪತ್ರೆಗಳಲ್ಲಿ ಕನ್ನಡ: ಅಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷಾ ವರದಿಗಳು ಅದಷ್ಟು ಕನ್ನಡದಲ್ಲಿಯೇ ಇರುವ ಹಾಗೆ ಕ್ರಮವಹಿಸಬೇಕು. ಕಡ್ಡಾಯವಾಗಿ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡುವಂತೆ ನೋಡಿಕೊಳ್ಳ ಬೇಕು. ವೈದ್ಯರು ಸಹ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಟಾನ ಸಮರ್ಪಕವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಸಮಸ್ಯೆಯ ಕುರಿತು ಪ್ರಥಮ ಪ್ರಾಶಸ್ತ್ಯದಲ್ಲಿ ಆದ್ಯತೆ ನೀಡಲಾಗುವುದು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಲು ಪ್ರತಿಯೊಬ್ಬ ಅಧಿಕಾರಿಯೂ ಮುಂದಾಗಬೇಕು. ಇಂದಿನ ಸಭೆ ಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವುದರೊಂದಿಗೆ ಕನ್ನಡ ಭಾಷೆಗೆ ಮತ್ತಷ್ಟು ಒತ್ತು ನೀಡೋಣ ಎಂದರು.

ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿ ಕಾರಿ ಅಬೀದ್ ಗದ್ಯಾಳ, ಅಪ್ತ ಕಾರ್ಯದರ್ಶಿ ಫಣಿ ಕುಮಾರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

‘ಕಾರ್ಯಪಾಲಕ ಅಭಿಯಂತರರ ಕಚೇರಿಯಿಂದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್, ನೋಟಿಫಿಕೇಶನ್‌ಗಳನ್ನು ಕನ್ನಡದಲ್ಲಿಯೆ ಕರೆಯುವುದರೊಂದಿಗೆ ಕಾರ್ಯಾದೇಶವನ್ನು ಕನ್ನಡ ಭಾಷೆಯಲ್ಲಿಯೇ ನೀಡಬೇಕು. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಟೆಂಡರ್ ಕಾರ್ಯಾದೇಶವನ್ನು ನೀಡಿದ್ದಲ್ಲಿ ಅವರು ಸ್ಥಳೀಯ ಕನ್ನಡಿಗರಿಗೆ ಉದ್ಯೊಗಾವಕಾಶಗಳನ್ನು ನೀಡುವ ಸಾಧ್ಯತೆ ಅಧಿಕವಿರುತ್ತದೆ. ಇದಕ್ಕೆ ಒತ್ತು ನೀಡಬೇಕುʼ.

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಸ್ಥಳೀಯ ಭಾಷೆಯನ್ನು ಮಾತನಾಡುವ ಒಬ್ಬರನ್ನಾದರೂ ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಸೂಕ್ತ. ಇದರಿಂದ ಸ್ಥಳೀಯ ಜನರು ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಳವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲೆಯ ಅಗ್ರಣಿ ಬ್ಯಾಂಕ್ ಸಭೆಯನ್ನು ನಡೆಸಿ, ಎಲ್ಲಾ ಬ್ಯಾಂಕುಗಳಿಗೆ ಸೂಚನೆಯನ್ನು ನೀಡಬೇಕುʼ.

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News