ಕಾರ್ಕಳ ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಸರಿಪಡಿಸಲು ಹಾಗೂ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸಚಿವರಿಗೆ ಕಾಂಗ್ರೆಸ್ ನಿಯೋಗದಿಂದ ಮನವಿ
ಕಾರ್ಕಳ : ಕಾರ್ಕಳ ಸಾರ್ವಜನಿಕ ಸರಕಾರಿ ಅಸ್ಪತ್ರೆಯಲ್ಲಿನ ಕೆಲವು ಸಮಸ್ಯೆಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತಿದ್ದು, ಅದನ್ನು ಅತಿ ಶೀಘ್ರವಾಗಿ ಸರಿಪಡಿಸುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನಿಯೋಗವು ಮನವಿ ಸಲ್ಲಿಸಿತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವತಃ ಯು.ಟಿ. ಖಾದರ್ ಅವರೇ ಆರೋಗ್ಯ ಸಚಿವರಾಗಿ ನೀಡಿದ ಅನುದಾನದ ಫಲವಾಗಿ ರೂ 9 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಆದರೆ ನಿರ್ವಹಣಾ ಜವಾಬ್ದಾರರ ನಿರ್ಲಕ್ಷದ ಪರಿಣಾಮವಾಗಿ ಸಾರ್ವಜನಿಕರು ಕೆಲವು ಸಮಸ್ಯೆಯನ್ನು ಎದುರಿಸುತ್ತಿದ್ದು, ಅದನ್ನು ಅತೀ ಶೀಘ್ರವಾಗಿ ಸರಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಹಾಗೂ ಬ್ಲಾಕ್ ಅಧ್ಯಕ್ಷರಾದ ಶುಭದರಾವ್ ಮೂಲಕ ನೀಡಿದ ಮನವಿಯಲ್ಲಿ ವಿನಂತಿಸಲಾಗಿದೆ.
ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ವೈದ್ಯರ ಅಲಭ್ಯ, ಮಕ್ಕಳ ವಿಭಾಗ, ಸ್ಕಾನಿಂಗ್ ಮತ್ತು ಎಕ್ಸರೇ ವಿಭಾಗದಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ, ಸರಕಾರಿ ರಜಾ ದಿನಗಳಲ್ಲಿ ವೈದ್ಯರ ಅಲಭ್ಯ ಮೊದಲಾದ ಸಮಸ್ಯೆಗಳನ್ನು ಮನವಿಯಲ್ಲಿ ಉಲ್ಲೆಖಿಸಲಾಗಿದೆ. ಹಾಗೂ ತಾಲೂಕಿನ ಬಜಗೋಳಿ ಮತ್ತು ಅಜೆಕಾರ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಮತ್ತು ದೊಡ್ಡರಂಗಡಿ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಲಿನಾಥ್ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಅಧ್ಯಕ್ಷೆ ಭಾನು ಭಾಸ್ಕರ್, ಇಂಟಕ್ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ, ಕೆ.ಎಂ.ಎಫ್ ನಿರ್ಧೇಶಕ ಸುಧಾಕರ್ ಶೆಟ್ಟಿ, ಪ್ರಥ್ವಿರಾಜ್ ಜೈನ್, ಸದಾನಂದ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.