×
Ad

ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ: ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಶಾಸಕ ಯಶ್‌ಪಾಲ್ ಸುವರ್ಣ ಟೀಕೆ

"ಈ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎಂಬುದು ನಮಗೆ ಗೊತ್ತಿದೆ"

Update: 2025-12-14 20:46 IST

ಉಡುಪಿ: ಅಧಿವೇಶನದಲ್ಲಿ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಪೀಠದಿಂದ ಟೀಕಿಸಿರುವುದು ಸರಿಯಲ್ಲ. ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ. ಆದರೆ ಸ್ಪೀಕರ್ ಅವರು ಹಗುರವಾಗಿ, ಹಿಂದೂ ಧರ್ಮದ ಹರಿಕಥೆ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕನಾಗಿ ನನಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕಿದೆ. 15 ದಿನಗಳ ಮುಂಚಿತವಾಗಿ ನಾನು ಸಲ್ಲಿಸಿದ್ದ ಪ್ರಶ್ನೆಯಿದು. ನಾನು ಎಂದಿಗೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಇಲ್ಲಿನ ಅಭಿವೃದ್ಧಿ ಹಾಗೂ ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿರುವುದು ಸರಿಯಲ್ಲ ಎಂದರು.

ಇದಲ್ಲದೆ, ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ತಂದೆಯ ಹೆಸರಲ್ಲಿ ಮತ ಕೇಳಿ ಅವರು ಶಾಸಕರಾದವರು. ಈ ನಡೆಗಳಿಂದ ನಮ್ಮ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಶನಿವಾರ ಪುತ್ತಿಗೆ ಶ್ರೀಗಳ ಕಾರ್ಯಕ್ರಮಕ್ಕೆ ಖಾದರ್ ಬರಬೇಕಿತ್ತು. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಹಾಗೂ ಧಿಕ್ಕಾರಕ್ಕೆ ಸಿದ್ಧರಾಗಿದ್ದರು. ಈ ಕಾರಣದಿಂದಲೇ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದರು.

ಈ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎಂಬುದು ನಮಗೆ ಗೊತ್ತಿದೆ. ಖಾದರ್ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಸಚಿವ ಸ್ಥಾನ ಪಡೆಯುವ ಆಕಾಂಕ್ಷೆಯಲ್ಲಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರನ್ನು ಟೀಕಿಸಿದರೆ ಹೈಕಮಾಂಡ್ ಗಮನ ಸೆಳೆಯಬಹುದು ಎಂಬ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ ಎಂದು ಅವರು ಟೀಕಿಸಿದರು.

ಉಡುಪಿ ಜನತೆಯ ಬಳಿ ಸ್ಪೀಕರ್ ಯು.ಟಿ.ಖಾದರ್ ಕ್ಷಮೆಯಾಚಿಸಬೇಕು. ಪರ್ಯಾಯಕ್ಕೆ ಅನುದಾನ ಕೇಳಿದಾಗ ಟೀಕಿಸಿರುವುದು ಸರಿಯಲ್ಲ. ಕಳೆದ ಮೂರು ಮಳೆಗಾಲಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿ ನಗರ ರಸ್ತೆಗಳು, ಚರಂಡಿಗಳು ಕೊಚ್ಚಿ ಹೋಗಿವೆ. ಸರಕಾರದಿಂದ ಸೂಕ್ತ ಅನುದಾನ ಬಂದಿಲ್ಲ. ಜನರು ನನ್ನನ್ನು ಆಯ್ಕೆ ಮಾಡಿರುವುದು ಜನಸೇವೆ ಮಾಡಲು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News