×
Ad

ಕನ್ನಡ ಶಾಲೆಗಳ ಉಳಿವಿಗಾಗಿ ಕಸಾಪದಿಂದ ಹೈಕೋರ್ಟ್‌ನಲ್ಲಿ ಪಿಐಎಲ್‌ಗೆ ಚಿಂತನೆ: ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ

Update: 2023-12-05 20:19 IST

ಮಹೇಶ್ ಜೋಶಿ

(ಬಿ.ಬಿ. ಶೆಟ್ಟಿಗಾರ್)

ಕೋಟ, ಡಿ.5: ರಾಜ್ಯದಲ್ಲಿ ಕನ್ನಡ ಶಾಲೆಗಳ ಹಾಗೂ ಭಾಷೆಯ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ದಾಖಲಿಸಲು ಚಿಂತನೆ ನಡೆಸಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.

ಕೋಟದ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಇಂದಿನಿಂದ ಪ್ರಾರಂಭಗೊಂಡ ಉಡುಪಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಅನುಸಂಧಾನ’ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ‘ವಾರ್ತಾಭಾರತಿ’ಯೊಂದಿಗೆ ಮಾತನಾಡುತ್ತಾ ಮೇಲಿನ ವಿಷಯ ತಿಳಿಸಿದರು. ಕನ್ನಡ ಪರ ಹೋರಾಟದಲ್ಲಿ ನಮಗೆ ನ್ಯಾಯಾಲಯಗಳ ತೀರ್ಪಿನಿಂದ ಹಿನ್ನಡೆಯಾಗಿದೆ ಎಂದರು.

ಇದಕ್ಕಾಗಿ ಇದೇ ಡಿ.13ರಂದು ಬೆಂಗಳೂರಿನಲ್ಲಿ ಸಾಹಿತಿಗಳ, ಕಾನೂನು ತಜ್ಞರ, ಕನ್ನಡ ಹೋರಾಟಗಾರರ, ನಿವೃತ್ತ ನ್ಯಾಯಾಧೀಶರ ಸಭೆಯೊಂದನ್ನು ಕರೆದಿದ್ದು, ಅಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಮಹತ್ವದ ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಸುಮಾರು 200 ಮಂದಿಯನ್ನ ಆಮಂತ್ರಿಸಲಾಗಿದೆ. ಹಂಪ ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಪ್ರಧಾನ ಗುರುದತ್ತ, ನ್ಯಾ.ಹಳ್ಳಿನಾಗರಾಜ್, ಜಸ್ಟಿಸ್ ನಾಗಮೋಹನ ದಾಸ್, ಬೇಲಿಮಠ ಸ್ವಾಮೀಜಿ, ಜಿಲ್ಲಾ, ತಾಲೂಕು ಕಸಾಪ ಅಧ್ಯಕ್ಷರು ಸೇರಿದಂತೆ ಸಾಕಷ್ಟು ಮಂದಿ ಈಗಾಗಲೇ ಸಭೆಯಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಭಾಷಾ ಮಾಧ್ಯಮದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು, ಸ್ಥಳೀಯರಿಗೆ ಉದ್ಯೋಗದ ಕುರಿತಂತೆ ನೀಡಿರುವ ತೀರ್ಪು ಹಾಗೂ ಇತ್ತೀಚೆಗೆ ಹರಿಯಾಣ ಸರಕಾರದ ವಿರುದ್ಧ ನೀಡಿರುವ ತೀರ್ಪನ್ನು ಗಮನದಲ್ಲಿರಿಸಿ ರಾಜ್ಯದಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಡಾ.ಜೋಶಿ ತಿಳಿಸಿದರು.

ಇನ್ನು ಮುಂದೆ ಒಂದೇ ಒಂದು ಕನ್ನಡ ಶಾಲೆಯನ್ನೂ ಮುಚ್ಚದೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಿಗೆ ಸೂಕ್ತ ಮೂಲಭೂತ ಕಲ್ಪಿಸಲು ಒತ್ತಾಯಿಸಿ ಈ ಪಿಐಎಲ್ ಸಲ್ಲಿಸಲಾಗುವುದು. ದುಸ್ಥಿತಿಯಲ್ಲಿರುವ ಶಾಲೆಗಳನ್ನು ಸುಸ್ಥಿತಿಗೆ ತನ್ನಿ ಎಂಬುದು ನಮ್ಮ ಬೇಡಿಕೆಯಾಗಿರುತ್ತದೆ.ಇದರೊಂದಿಗೆ ಕನ್ನಡ ಶಾಲೆಗಳಿಗೆ ಅನುದಾನವನ್ನು ಹೆಚ್ಚಿಸಬೇಕು ಎಂದರು.

ಕಾನೂನು ಅನುಷ್ಠಾನಗೊಳಿಸಿ: ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನಿಗೆ ಕಳೆದ ಫೆಬ್ರವರಿಯಲ್ಲಿ ರಾಜ್ಯಪಾಲರ ಅಂಕಿತ ಬಿದ್ದಿದೆ. ನಿಯಮ ರೂಪಿಸಿ, ಆಡಳಿತಾತ್ಮಕ ಆದೇಶ ಹೊರಡಿಸಿಲ್ಲ.ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನು ಜಾರಿಗೊಳಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಈಡೇರಿಲ್ಲ. ಬೆಳಗಾವಿ ಅಧಿವೇಶನದ ಬಳಿಕ ಈ ಬಗ್ಗೆ ಮತ್ತೆ ಪ್ರಯತ್ನಿಸಲಾಗುವುದು ಎಂದರು.

ಕಾನೂನಿನ ಅನುಷ್ಠಾನದಲ್ಲಿ ಇನ್ನು ವಿಳಂಬ ಸರಿಯಲ್ಲ. ಅದರಲ್ಲಿ ಲೋಪ ದೋಷಗಳಿದ್ದರೆ ತಿದ್ದುಪಡಿ ಮಾಡಬಹುದು. ಮೊದಲು ಜಾರಿಯ ದಿನ ನಿಗದಿಪಡಿಸಿ ಎಂದು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಿಗೆ ಪತ್ರ ಬರೆಯುವೆ ಎಂದು ಮಹೇಶ್ ಜೋಶಿ ತಿಳಿಸಿದರು.

ಮಂಡ್ಯದಲ್ಲೇ ಮುಂದಿನ ಸಮ್ಮೇಳನ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲೇ ನಡೆಯಲಿದೆ. ಅದನ್ನು ವರ್ಗಾಯಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಾದ್ಯಂತ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲೇ ಕಂಡು ಬಂದ ಬರ ಹಾಗೂ ನ್ಯಾಯಾಲಯದ ಆದೇಶದಂತೆ ಕಾವೇರಿ ನೀರು ಹರಿಸಬೇಕಾದ ಅನಿವಾರ್ಯ ಸಂಕಟ, ನೋವಿನ ನಡುವೆ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಬ್ಬ ಆಚರಣೆ ಸರಿಯಲ್ಲವೆಂದು ಮಾನವೀಯತೆ ದೃಷ್ಟಿಯಿಂದ ಸ್ವಇಚ್ಛೆಯಿಂದ ಮುಂದೂಡಲಾಗಿದೆ ಎಂದು ಅವರು ಹೇಳಿದರು.

ಸಮ್ಮೇಳನ ಮಂಡ್ಯದಲ್ಲಿ ನಡೆಸಿಯೇ ಸಿದ್ಧ. 2024ರ ಮೊದಲಾರ್ಧದಲ್ಲೇ ಅದನ್ನು ನಡೆಸಲು ಸಮಾಲೋಚನೆ ನಡೆದಿದೆ. ಶಾಲೆಗಳ ರಜೆ, ಪರೀಕ್ಷೆಗಳನ್ನು ನೋಡಿಕೊಂಡು ದಿನ ನಿಗದಿ ಪಡಿಸಲಾಗುವುದು. ಬೆಳಗಾವಿ ಅಧಿವೇಶನ ಬಳಿಕ ಮುಖ್ಯಮಂತ್ರಿ, ಸಚಿವರ ಜೊತೆ ಚರ್ಚಿಸಿ ಸಮ್ಮೇಳನದ ದಿನಾಂಕ ನಿರ್ಧಾರವಾಗಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಸಮ್ಮೇಳನ ನಡೆಸುವ ಚಿಂತನೆಯಿದೆ ಎಂದು ವಿವರಿಸಿದರು.

ಸದಸ್ಯರ ಪಟ್ಟಿ ನವೀಕರಣ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾನು ಬಂದಾಗ ಇದ್ದ ಸುಮಾರು 2.30ಲಕ್ಷ ಸದಸ್ಯರ ಪಟ್ಟಿಯ ನವೀಕರಣ ನಡೆಯುತ್ತಿದೆ. ಅದರಲ್ಲಿ ಮೃತಪಟ್ಟ ಸದಸ್ಯರು, ವಿಳಾಸ ಬದಲಾದ ಒಂದು ಲಕ್ಷ ಸದಸ್ಯರ ಹೆಸರನ್ನು ತೆಗೆದುಹಾಕಲಾಗಿದೆ. ಪ್ರಸ್ತುತ ನಾಲ್ಕು ಲಕ್ಷ ಸದಸ್ಯರಿದ್ದಾರೆ. ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸುವ ಗುರಿಯೊಂದಿಗೆ ಅಭಿಯಾನಕ್ಕೆ ತಯಾರಿ ನಡೆದಿದೆ.

ಇದಕ್ಕಾಗಿ ರಾಜ್ಯದ ವಿವಿಗಳು, ಕಾಲೇಜುಗಳು, ಕೈಗಾರಿಕಾ ಸಂಸ್ಥೆಗಳು, ಸಂಘ ಸಂಸ್ಥೆಗಳಿಗೆ ಕಸಾಪ ಸದಸ್ಯತ್ವ ಪಡೆ ಯಲು ಪತ್ರ ಬರೆದಿದ್ದು, ವ್ಯವಸ್ಥಿತ ರೀತಿಯಲ್ಲಿ ಅಭಿಯಾನ ನಡೆಯುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಸದಸ್ಯತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೂ ಸದಸ್ಯತ್ವ ಪಡೆಯಲು ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಆ್ಯಪ್ ಸಿದ್ಧವಾಗಿದೆ. ಆನ್‌ಲೈನ್ ಬಳಸಲಾರದವರಿಗೆ ಆಫ್‌ಲೈನ್‌ನಲ್ಲೂ ಅವಕಾಶ ನೀಡಲಾ ಗುವುದು ಎಂದರು.

ಕಸಾಪ ಸದಸ್ಯರ ಸಂಖ್ಯೆ ಗುರಿಯಂತೆ ಒಂದು ಕೋಟಿ ತಲುಪಿದರೆ, ಮುಂದಿನ ಚುನಾವಣೆ ನಡೆಸಲು ಆನ್‌ಲೈನ್ ಮತದಾನ ಅನಿವಾರ್ಯ ವಾಗಲಿದೆ. ಆ್ಯಪ್ ಮೂಲಕವೇ ಇದನ್ನು ನಡೆಸಲು ಯೋಚನೆ ಇದೆ. ಇದಕ್ಕೆ ಕಾನೂನು ತಿದ್ದುಪಡಿಯಾಗಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಸಾಪಕ್ಕೆ ನೀಡುವ ಸರಕಾರದ ಅನುದಾನವನ್ನು 25ಕೋಟಿ ರೂ.ಗೆ ಹೆಚ್ಚಿಸಲು ಬೇಡಿಕೆ ಮಂಡಿಸಲಾಗಿದೆ. ಈಗ ನೀಡಲಾಗುವ ಐದು ಕೋಟಿ ರೂ.ಅನುದಾನದಲ್ಲಿ ಕೇವಲ 1.66 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ. ಮುಂದಿನ ಬಜೆಟಲ್ಲಿ ಕನ್ನಡದ ಕೆಲಸಕ್ಕೆ 25ಕೋಟಿ ರೂ. ಅನುದಾನದ ಬೇಡಿಕೆ ಮುಂದಿಡಲಾಗುವುದು.

ಕನ್ನಡ ಭಾಷೆ, ಸಂಸ್ಕೃತಿ, ಬೆಳವಣಿಗೆ, ಅಸ್ಮಿತೆ ಉಳಿಸುವುದೇ ಕಸಾಪ ಗುರಿ. ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷ ರಾಗಿದ್ದ ಸಿಎಂ ಸಿದ್ಧರಾಮಯ್ಯ ಕಸಾಪ ಕನ್ನಡದ ಕೆಲಸಕ್ಕೆ ಕೇಳುವ ಅನುದಾನದ ಬಗ್ಗೆ ಧಾರಾಳತನ ತೋರಬೇಕು ಎಂದು ಅವರು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News