×
Ad

ಕಾಪು ಪತ್ರಕರ್ತರ ಸಂಘದ ಸ್ನೇಹ ಸಂಗಮ

Update: 2026-06-08 19:23 IST

ಪಡುಬಿದ್ರಿ: ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ನೇಹ ಸಂಗಮ 2026 ಕಾರ್ಯಕ್ರಮ ಶನಿವಾರ ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಶೈಕ್ಷಣಿಕ ಸಾಧನೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಉಡುಪಿ ಜಿಲ್ಲೆ, ಮಾದಕ ವಸ್ತುಗಳ ಸೇವನೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಹೆಚ್ಚಿನ ನಿಗಾ ವಹಿಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮನುಷ್ಯನು ತನ್ನ ಬದುಕಿನ ಜೊತೆಗೆ ಇತರ ಜೀವಿಗಳೂ ಪ್ರಕೃತಿಯೊಂದಿಗೆ ಸಹಜೀವನ ನಡೆಸುವ ವಾತಾವರಣ ನಿರ್ಮಿಸಬೇಕಿದೆ. ಸಮಾಜದಲ್ಲಿ ಪರಿಸರ ಸಮತೋಲನ ಕದಡುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಾದ ಎಸೆಸೆಲ್ಸಿ ಸಾಧಕರಾದ ಅನಿಶಾ ಆಚಾರ್ಯ ಉಚ್ಚಿಲ, ಎಚ್. ಪವನ್ ಹಾಗೂ ಪಿಯುಸಿ ಸಾಧಕ ಯಶಸ್ ಪಿ. ಸುವರ್ಣ ಅವರನ್ನು ಗೌರವಿಸಲಾಯಿತು. ಅಲ್ಲದೆ, ಎರಡೂವರೆ ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಿಕಟಪೂರ್ವ ಅಧ್ಯಕ್ಷ ಹರೀಶ್ ಹೆಜ್ಮಾಡಿ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಮಾತನಾಡಿದರು. ಕಾರ್ಯದರ್ಶಿ ಸುರೇಶ್ ಎರ್ಮಾಳು, ಕಾಪು ತಾಲೂಕು ಸಂಘದ ಕೋಶಾಧಿಕಾರಿ ಸಂತೋಷ್ ನಾಯ್ಕ್ ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಸ್ವಾಗತಿಸಿದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಕುಂಜೂರು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News