ಉಡುಪಿ ಸರ್ವೀಸ್ ಬಸ್ ನಿಲ್ದಾಣ ತುರ್ತು ಕಾಮಗಾರಿಗೆ ಸೂಚನೆ
ಶಾಸಕರು, ನಗರಸಭೆ ಅಧಿಕಾರಿಗಳಿಂದ ನಿಲ್ದಾಣದ ಅವ್ಯವಸ್ಥೆ ಪರಿಶೀಲನೆ
ಉಡುಪಿ : ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ಮಳೆ ಬರುವ ಸಂದರ್ಭದಲ್ಲಿ ಮೇಲ್ಛಾವಣಿ ಮಳೆ ನೀರು ಸೋರಿ ಪ್ರಯಾಣಿಕರು ಕೊಡೆ ಹಿಡಿದು ಬಸ್ ನಿಲ್ದಾಣದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣದ ಮೇಲ್ಛಾವಣಿಯ ಶೀಟುಗಳು ಶಿಥಿಲಗೊಂಡು ಗಾಳಿ, ಮಳೆ, ಬಿಸಿಲಿಗೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು 2 ದಿನಗಳಲ್ಲಿ ತುರ್ತು ಕಾಮಗಾರಿ ನಡೆಸುವಂತೆ ಶಾಸಕರು, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರಿಗೆ ಸೂಚನೆ ನೀಡಿದರು. ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿಯ ಬಗ್ಗೆ ಪ್ರಯಾಣಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಈಗಾಗಲೇ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ನಗರಸಭೆ ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರೀಶ್ ಅಂಚನ್, ಗಿರಿಧರ ಆಚಾರ್ಯ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಮಂಜು ಕೊಳ, ಲಕ್ಷ್ಮಣ್ ಮಲ್ಪೆ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸ್ ನಿಲ್ದಾಣ ಸಮಸ್ಯೆಗೆ ಶಾಸಕರ ನಿರ್ಲಕ್ಷ್ಯ ಕಾರಣ: ಕಾಂಚನ್
ಮಳೆಗಾಲದಲ್ಲಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನೀರು ಸೋರಿಕೆಯಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿರುವ ಕುರಿತು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬಸ್ ನಿಲ್ದಾಣ ಅವ್ಯವಸ್ಥೆ ಕಂಡಾಗ ಉಡುಪಿ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಅವರು ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ. ಶಾಸಕರು ಇನ್ನಾದರೂ ಈ ಬಗ್ಗೆ ನಿಗಾವಹಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.
ನಾನು ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಇಲ್ಲಿನ ಅಂಗಡಿ ಮಾಲಕರು, ಸಾವರ್ಜನಿಕರು ಇಲ್ಲಿನ ಸಮಸ್ಯೆಗಳ ಕುರಿತು ತಮ್ಮ ದೂರುಗಳನ್ನು ನೀಡಿದ್ದಾರೆ. ಈಗಾಗಲೇ ನಗರಸಭೆಯ ಆಯುಕ್ತರನ್ನು ಸಂಪರ್ಕಿಸಿ ಇಲ್ಲಿನ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡುವಂತೆ ಕೋರಿದ್ದೇನೆ ಎಂದರು.