Karkala | ಸಮಾಜಸೇವೆಯ ಮೂಲಕ ಜನರ ಬದುಕಿಗೆ ಬೆಳಕು ನೀಡುತ್ತಿರುವ ಉದಯ್ ಶೆಟ್ಟಿ : ಈಶ ವಿಠಲದಾಸ ಸ್ವಾಮೀಜಿ
ಕಾರ್ಕಳ: ಉದಯ್ ಶೆಟ್ಟಿ ಮುನಿಯಾಲು ಅವರ ಪರಿಪೂರ್ಣ ಬದುಕು ಆದರ್ಶಪ್ರಾಯವಾಗಿದ್ದು, ಬಡವರ ಕಣ್ಣೊರೆಸುವ ಅವರ ಸಮಾಜಮುಖಿ ಕಾರ್ಯಗಳು ಪ್ರಶಂಸನೀಯ ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಉದಯ್ ಶೆಟ್ಟಿ ಮುನಿಯಾಲು ಅವರ ಜನ್ಮದಿನದ ಅಂಗವಾಗಿ ಉದಯ್ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಬಂಡೀಮಠ ಮೂಡುಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬೃಹತ್ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಡಿಜಿಟಲ್ ಯುಗದಲ್ಲಿ ಯುವಜನತೆ ಯಾಂತ್ರಿಕ ಬದುಕಿಗೆ ಅತಿಯಾಗಿ ಒಲವು ತೋರುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಾ ಪಲಾಯನವನ್ನು ತಡೆಯುವ ಜೊತೆಗೆ ಯುವಕರ ಸೃಜನಾತ್ಮಕ ಚಿಂತನೆಗಳಿಗೆ ಸ್ಥಳೀಯ ಮಟ್ಟದಲ್ಲೇ ಅವಕಾಶ ಕಲ್ಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೌಲಾನಾ ಜಿ. ಅಬ್ದುಲ್ ಹಫೀಸ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನ ನಮ್ಮತನವನ್ನು ಉಳಿಸುತ್ತದೆ ಎಂದರು. ಉದಯ್ ಶೆಟ್ಟಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಭಿನಂದನಾರ್ಹ ಎಂದು ಹೇಳಿದರು.
ಅತ್ತೂರು ಬಸಿಲಿಕಾದ ವಂ. ಅಲ್ಬನ್ ಡಿಸೋಜಾ ಮಾತನಾಡಿ, ಉದಯ್ ಶೆಟ್ಟಿ ಅವರು ತಮ್ಮ ಜೀವನ ಪಯಣದಲ್ಲಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಹುಟ್ಟುಹಬ್ಬದ ದಿನ ರಕ್ತದಾನ, ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ 27 ಸರ್ಕಾರಿ ಶಾಲೆಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಗ್ನಿವೀರ್ ಆಗಿ ಸೇವೆ ಸಲ್ಲಿಸುತ್ತಿರುವ ಅನಂತ್ ನಾಯ್ಕ್ ಹಾಗೂ 85 ಬಾರಿ ರಕ್ತದಾನ ಮಾಡಿದ ಪತ್ರಕರ್ತ ಮೊಹಮ್ಮದ್ ಶರೀಫ್ ಅವರನ್ನು ಅಭಿನಂದಿಸಲಾಯಿತು.
ಕಾರ್ಕಳ–ಹೆಬ್ರಿ ತಾಲೂಕು ವ್ಯಾಪ್ತಿಯ 630 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಆರೋಗ್ಯ ವಿಮೆ ಕಾರ್ಡ್‌ಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ 86 ಯುನಿಟ್ ರಕ್ತ ಸಂಗ್ರಹವಾಗಿದ್ದು, ಆರೋಗ್ಯ ಹಾಗೂ ಸ್ತ್ರೀರೋಗ ತಪಾಸಣಾ ಶಿಬಿರಗಳಲ್ಲಿ ನೂರಾರು ಜನರು ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ನಾವು ಗಳಿಸಿದ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ವಿನಿಯೋಗಿಸಿದಾಗ ದೊರೆಯುವ ಸಂತೋಷಕ್ಕೆ ಸಮನಾದುದು ಮತ್ತೊಂದಿಲ್ಲ. ಒಳ್ಳೆಯ ಮನಸ್ಸಿನಿಂದ ಕೈಗೊಂಡ ಸಮಾಜಸೇವೆ ಮಾತ್ರ ಸಾರ್ಥಕತೆ ತಂದುಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಪುಣೆ ಉದ್ಯಮಿ ಪ್ರಕಾಶ್ ಶೆಟ್ಟಿ, ವೆಂಕಟರಮಣ ದೇವಸ್ಥಾನದ ಅರ್ಚಕ ಗಣೇಶ್ ಭಟ್, ಕಾರ್ಕಳ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಹೆಬ್ರಿಯ ಅಧ್ಯಕ್ಷ ಶಂಕರ್, ಎಸ್.ಸಿ. ಘಟಕದ ಅಧ್ಯಕ್ಷ ದೇವದಾಸ್, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ಹೆಬ್ರಿಯ ಸುಮಾ, ಉದಯ್ ಕುಮಾರ್ ಶೆಟ್ಟಿಯವರ ಪತ್ನಿ ನಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಯಶೋಧ ಶೆಟ್ಟಿ ಅಜೆಕಾರು ಪ್ರಾರ್ಥಿಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ವಂದಿಸಿದರು.