Kundapur | ಜೂ.13ರಂದು ಕೆರೆಕಟ್ಟೆ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ, ನಿರ್ಗತಿಕರ ಆಶ್ರಮದ ಉದ್ಘಾಟನೆ
ಕುಂದಾಪುರ : ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾಗಿರುವ ಆಶ್ರಮದ ಉದ್ಘಾಟನೆ ಕಾರ್ಯಕ್ರಮ ಜೂ.13ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ನೂತನ ಆಶ್ರಮವನ್ನು ಉದ್ಘಾಟಿಸಿ, ಮಹೋತ್ಸವದ ಬಲಿ ಪೂಜೆಯ ನೇತೃತ್ವ ವಹಿಸಲಿರುವರು. ಸಂಜೆ 4 ಗಂಟೆಗೆ ಕನ್ನಡ ಭಾಷೆಯಲ್ಲಿ ಪರಮ ಪ್ರಸಾದ ಆರಾಧನೆ ಮತ್ತು ಪವಿತ್ರ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ವಂ.ರೋಮನ್ ಪಿಂಟೊ ನೆರವೇರಿಸಲಿರುವರು.
ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಪ್ರಸಿದ್ಧ ಕ್ರೈಸತಿ ಯಾತ್ರಾಸ್ಥಳವಾಗಿದ್ದು, ತನ್ನದೇ ಆದ ಅದ್ಭುತ ಇತಿಹಾಸ ಮತ್ತು ಪವಾಡಗಳಿಗೆ ಹೆಸರುವಾಸಿಯಾಗಿದೆ. ಬಸ್ರೂರಿನ ಸಂತ ಫಿಲಿಪ್ ನೆರಿ ಚರ್ಚ್ ನ ವ್ಯಾಪ್ತಿಗೆ ಒಳಪಟ್ಟಿದ್ದ ಈ ಪವಿತ್ರ ಕ್ಷೇತ್ರವು, ಕೇವಲ 8 ಕುಟುಂಬಗಳು ಹಾಗೂ 22 ಸದಸ್ಯರನ್ನು ಒಳಗೊಂಡಿದೆ. 2013ರ ಜೂ.13ರಂದು ಅಧಿಕೃತವಾಗಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಟ್ಟಿತು.
ನಿರ್ಗತಿಕರ ಆಶ್ರಮ :
ಉಡುಪಿ ಧರ್ಮಪ್ರಾಂತ್ಯದ ಮೊದಲ ಧರ್ಮಾಧ್ಯಕ್ಷ ಪ್ರಸ್ತುತ ನಿವೃತ್ತರಾಗಿರುವ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ನಿರ್ಗತಿಕರಿಗಾಗಿ ಆಶ್ರಮವನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದರು. ಪುಣ್ಯ ಕ್ಷೇತ್ರದ ರೆಕ್ಟರ್ ವಂ.ಸುನೀಲ್ ವೇಗಸ್ ನೇತೃತ್ವದಲ್ಲಿ ದಾನಿಗಳ ಸಹಕಾರ ದೊಂದಿಗೆ 2023ರ ಜೂ.13ರಂದು ಅಂದಿನ ಧರ್ಮಾಧ್ಯಕ್ಷರಿಂದ ಶಿಲನ್ಯಾಸ ಮಾಡಿದ್ದು, ಪ್ರಸ್ತುತ ನಿರ್ಗತಿಕರ ವಾಸಕ್ಕಾಗಿ ಸಜ್ಜಾಗಿದೆ.
ಆಶ್ರಮದಲ್ಲಿ 60 ಮಂದಿ ನಿರ್ಗತಿಕರಿಗೆ ವಾಸಕ್ಕೆ ಅವಕಾಶವಿದ್ದು, ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಜೀವಿಸಲು ಅವಕಾಶ ನೀಡಲಾಗುತ್ತದೆ. ಇಲ್ಲಿ ವಾಸಿಸುವ ಫಲಾನುಭವಿಗಳಿಗೆ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಶ್ರಮದಲ್ಲಿ ವಾಸಿಸುವವರ ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ನೇತೃತ್ವದಲ್ಲಿ ನಡೆಯಲಿದೆ. ಆಶ್ರಮದ ಅಭಿವೃದ್ದಿಯ ನಿಟ್ಟಿನಲ್ಲಿ ದಾನಿಗಳಿಗೆ ಪ್ರೋತ್ಸಾಹ ಸಹಕಾರ ನೀಡಲು ಅವಕಾಶವಿದ್ದು ಪುಣ್ಯಕ್ಷೇತ್ರ ರೆಕ್ಟರ್ ಅವರನ್ನು ಸಂಪರ್ಕಿಸಬಹುದು ಎಂದು ವಂ.ಸುನೀಲ್ ವೇಗಸ್ ತಿಳಿಸಿದ್ದಾರೆ.
ಹಿಂದಿನ ಧರ್ಮಾಧ್ಯಕ್ಷರ ಕನಸಿನ ಯೋಜನೆಗೆ ದಾನಿಗಳ ನೆರವಿನೊಂದಿಗೆ ಸುಸಜ್ಜಿತವಾದ ನಿರ್ಗತಿಕರ ಆಶ್ರಮವನ್ನು ನಿರ್ಮಿಸಲಾಗಿದ್ದು, ನೆಲೆ ಇಲ್ಲದ ವ್ಯಕ್ತಿಗಳ ಮುಂದಿನ ಜೀವನ ಶಾಂತಿಯುತವಾಗಿ ಸಾಗಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ದಾನಿಗಳ ಬೆಂಬಲ ಸಹಕಾರದೊಂದಿಗೆ ಆಶ್ರಮ ವಾಸಿಗಳಿಗೆ ನೆಮ್ಮದಿಯ ಜೀವನ ಕಾಣಲು ಪುಣ್ಯಕ್ಷೇತ್ರ ಮುಂದೆಯೂ ಶ್ರಮಿಸಲಿದೆ.
-ವಂ.ಸುನೀಲ್ ವೇಗಸ್, ಪುಣ್ಯಕ್ಷೇತ್ರದ ರೆಕ್ಟರ್