×
Ad

ಕುಂದಾಪುರ: ‘ಖಾಕಿ ಕಾರ್ಟೂನು ಹಬ್ಬ’ಕ್ಕೆ ಚಾಲನೆ ನೀಡಿದ ಪೊಲೀಸ್ ಮಹಾನಿರ್ದೇಶಕ ದಯಾನಂದ್

‘ಕಾರ್ಟೂನಿಸ್ಟ್‌ಗಳಿಂದ ವಿಭಿನ್ನ ದೃಷ್ಟಿಕೋನದಲ್ಲಿ ಸಮಾಜ ತಿದ್ದುವ ಕೆಲಸ’

Update: 2025-11-16 00:01 IST

ಕುಂದಾಪುರ: ಕಾರ್ಟೂನ್ ಒಂದು ವಿಶಿಷ್ಟ ಕಲೆಯಾಗಿದ್ದು, ಅದು ಕೇವಲ ಚಿತ್ರದಿಂದಲೇ ಭಾವನಾತ್ಮಕವಾಗಿ ವಿಷಯಗಳನ್ನು ತಿಳಿಸುತ್ತದೆ. ಈ ಕಲೆಯನ್ನು ಮುಂದಿನ ಪೀಳಿಗೆಗೂ ಪಸರಿಸುವ ಕಾರ್ಯ ಆಗಬೇಕು. ಸರಳ ರೀತಿಯಲ್ಲಿ ವಿಭಿನ್ನವಾದ ದೃಷ್ಟಿಕೋನದಲ್ಲಿ ಸಮಾಜವನ್ನು ತಿದ್ದುವ ಕೆಲಸವನ್ನು ವ್ಯಂಗ್ಯಚಿತ್ರಕಾರರು ಮಾಡುತ್ತಾರೆ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ್ ಹೇಳಿದ್ದಾರೆ.

ಕುಂದಾಪುರ ಬೋರ್ಡ್ ಹೈಸ್ಕೂಲಿನ ರೋಟರಿ ಕಲಾಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಭಾಗಿತ್ವದೊಂದಿಗೆ ನ.15 ರಿಂದ19 ರವರೆಗೆ ಹಮ್ಮಿಕೊಳ್ಳಲಾಗಿರುವ ‘ಖಾಕಿ ಕಾರ್ಟೂನ್ ಹಬ್ಬ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾಜವನ್ನು ಸೂಕ್ಷ್ಮದರ್ಶಕದಂತೆ ಅವಲೋಕಿಸುವ ವ್ಯಂಗ್ಯ ಚಿತ್ರಕಾರರು, ಕಟುವಾಗಿ ಹೇಳಬೇಕಾದುದನ್ನು ಗೆರೆಗಳ ಮೂಲಕ ತಲುಪಿಸುವ ಕೆಲಸವನ್ನು ಮಾಡುತ್ತಾರೆ. ನ್ಯೂನ್ಯತೆಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ ಜನರಲ್ಲಿ ಸರಿವು ಮೂಡಿಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಹೆಚ್ಚು ವಿರೋಧವನ್ನು ಎದುರಿಸುವ ವ್ಯಂಗ್ಯಚಿತ್ರಕಾರರಿಗೆ ಅವರ ಬದ್ಧತೆಯೇ ರಕ್ಷಣೆಯಾಗಿದೆ. ಆಳುವ ವರ್ಗ ಜನವಿರೋಧಿ ನಿಲುವಿಗೆ ಮುಂದಾದರೆ, ಮಹಿಳೆಯರೂ, ಮಕ್ಕಳು, ದಲಿತರು, ಬಡವರ ಬಗ್ಗೆ ಸಮಾಜ ಕಡೆಗಣಿಸಿದರೇ, ತಮ್ಮ ಕಾರ್ಟೂನ್ ಮೂಲಕ ಎಚ್ಚರಿಸುವ ಕೆಲಸವನ್ನು ವ್ಯಂಗ್ಯಚಿತ್ರಕಾರರು ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು, 75 ಪೊಲೀಸ್ ಸಿಬ್ಬಂದಿಗಳು ಕಾರ್ಯಾಗಾರ ದಲ್ಲಿ ವ್ಯಂಗ್ಯಚಿತ್ರ ರಚಿಸುವ ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ನಿವೃತ್ತ ಪೊಲೀಸ್ ಉಪ ಆಯುಕ್ತರುಗಳಾದ ಜಿ.ಎ. ಬಾವಾ, ವಿನಯ್ ಗಾಂವ್ಕರ್, ಹಿರಿಯ ವಕೀಲ ಎಎಸ್‌ಎನ್ ಹೆಬ್ಬಾರ್, ಗೃಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್‌ಐ ಪ್ರಸನ್ನ, ಆರ್ಮಡ್ ರಿಸರ್ವ್ ಎಸ್‌ಐ ಜೋಸ್, ಡಿಸಿಆರ್‌ಬಿ ಎಎಸ್‌ಐ ಪ್ರಕಾಶ್, ಕಂಪ್ಯೂಟರ್ ವಿಭಾಗದ ಆರ್ಮಡ್ ಹೆಡ್ ಕಾನ್ಸ್ಟೇಬಲ್ ವಿಜಯ ಮೊಗವೀರ, ಡಿಪಿಓ ಸಿವಿಲ್ ಹೆಡ್‌ಕಾನ್‌ಸ್ಟೇಬಲ್ ಶಿವಾನಂದ ಬಿ. ಅವರನ್ನು ಸನ್ಮಾನಿಸಲಾಯಿತು.

ಕಾರ್ಟೂನ್ ಹಬ್ಬದ ಸಂಘಟಕ, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು. ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News