ಕುಂದಾಪುರ | ಶ್ರಮನೀತಿ -2025ರ ಕರಡು ಪ್ರತಿ ದಹಿಸಿದ ಹಂಚು ಕಾರ್ಮಿಕರು !
ಕುಂದಾಪುರ, ನ.26: ಕುಂದಾಪುರ ಹಂಚು ಕಾರ್ಖಾನೆಗಳಲ್ಲಿ ಬುಧವಾರ ಹಂಚು ಕಾರ್ಮಿಕರು ಕೆಲಸ ಆರಂಭಕ್ಕೂ ಮುನ್ನ ಕಾರ್ಖಾನೆ ದ್ವಾರಗಳಲ್ಲಿ ಶ್ರಮಶಕ್ತಿ ನೀತಿ -2025ರ ಕರಡು ಪ್ರತಿಯನ್ನು ದಹಿಸಿ ಪ್ರತಿಭಟಿಸಿದರು.
ಮಂಗಳೂರು ಟೈಲ್ಸ್ ನಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಶ್ರಮಶಕ್ತಿ ನೀತಿ -2025 ಅನ್ನು 300 ಮಂದಿ ಕಾರ್ಮಿಕರು ಒಳಗೆ ಇರುವ ಕಾರ್ಖಾನೆಗಳನ್ನು ಮಾಲಕರು ಯಾವುದೇ ಸಮಯದಲ್ಲಿ ಸರಕಾರದ ಅನುಮತಿ ಇಲ್ಲದೆ ಬಂದ್ ಮಾಡಲು ಅವಕಾಶ ನೀಡುತ್ತದೆ. ಇದು ಬಹಳ ಅಪಾಯಕಾರಿಯಾಗಿದೆ ಎಂದರು.
ಕಾರ್ಮಿಕರಿಗೆ ಅನ್ಯಾಯ ಮಾಲಕರಿಂದ ಆದಾಗ ಪ್ರತಿಭಟಿಸಿದರೆ ಅದು ಅಪರಾಧ ಎಂದು ಈ ಸಂಹಿತೆ ಹೇಳುತ್ತದೆ. ಕಾರ್ಮಿಕ ನಿರೀಕ್ಷಕರು ಕಾರ್ಮಿಕ ರಕ್ಷಣೆಗೆ ಕಾರ್ಖಾನೆಯೊಳಗೆ ಅವರ ಸುರಕ್ಷೆ ಬಗ್ಗೆ ಪರಿಶೀಲಿಸುವಂತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಶ್ರಮಶಕ್ತಿ -2025 ಕಾರ್ಮಿಕರ ಪಾಲಿನ ಮರಣ ಶಾಸನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕಾರ್ಖಾನೆಯಲ್ಲಿ ಸಿಐಟಿಯು ಮುಖಂಡರಾದ ಸುರೇಂದ್ರ ಎಚ್., ಗಣಪ, ಗ್ರೀನ್ಲ್ಯಾಂಡ್ ಕಾರ್ಖಾನೆಯಲ್ಲಿ ಚಂದ್ರ ಪೂಜಾರಿ, ಪ್ರಭಾಕಿರಣ ಕಾರ್ಖಾನೆಯಲ್ಲಿ ಪಂಜು ಪೂಜಾರಿ ಗುಲ್ವಾಡಿ, ನಾಗರಾಜ, ಭಾಸ್ಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.