×
Ad

ಕುಂದಾಪುರ | ತ್ರಾಸಿ-ಮರವಂತೆಯಲ್ಲಿ ಇಲ್ಲವಾಗಿದೆ ವಾಟರ್ ಗೇಮ್ಸ್!

Update: 2025-12-05 19:01 IST

ಕುಂದಾಪುರ, ಡಿ.5: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ತ್ರಾಸಿ- ಮರವಂತೆ ಬೀಚ್ ನಲ್ಲಿ ಕಳೆದ ಜೂನ್ ನಲ್ಲಿ ಸ್ಥಗಿತಗೊಳಿಸಲಾದ ಜಲಸಾಹಸ (ವಾಟರ್ ಗೇಮ್ಸ್) ಕ್ರೀಡೆಗಳು ಡಿಸೆಂಬರ್ ತಿಂಗಳಾದರೂ ಇನ್ನೂ ಆರಂಭ ಗೊಂಡಿಲ್ಲ. ಇದರಿಂದ ವರ್ಷಾಂತ್ಯಕ್ಕೆ, ಕ್ರಿಸ್ಮಸ್ ರಜೆಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಮನೋರಂಜನೆಯೇ ಇಲ್ಲದಂತಾಗಿದೆ.

ಮಳೆಗಾಲ ಆರಂಭಕ್ಕೂ ಮುನ್ನ ಜಲ ಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದಾಗಿ ಬರೋಬ್ಬರಿ 5 ತಿಂಗಳುಗಳೇ ಕಳೆದಿದೆ. ಮಳೆಗಾಲ ಮುಗಿದೇ 2 ತಿಂಗಳಾಗಿವೆ. ಮಲ್ಪೆ ಸಹಿತ ಇನ್ನಿತರೆಡೆಗಳ ಬೀಚ್ಗಳಲ್ಲಿ ಈಗಾಗಲೇ ವಾಟರ್ ಗೇಮ್ಸ್ ಗಳು ಅಕ್ಟೋಬರ್ ನಿಂದಲೇ ಆರಂಭಗೊಂಡಿವೆ. ಆದರೆ ರಾಜ್ಯದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾದ, ವಿಶ್ವ ಪ್ರಸಿದ್ಧ ತಾಣವೆಂದು ಕರೆಯಿಸಿಕೊಳ್ಳುತ್ತಿರುವ ತ್ರಾಸಿ-ಮರವಂತೆ ಬೀಚ್ ನಲ್ಲಿ ಮಾತ್ರ ಇನ್ನೂ ವಾಟರ್ ಗೇಮ್ಸ್ ಆರಂಭಕ್ಕೆ ಜಿಲ್ಲಾಡಳಿತವಾಗಲಿ, ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿಲ್ಲ.

ತ್ರಾಸಿ-ಮರವಂತೆ ಬೀಚ್ ನಲ್ಲಿ ಹಿಂದೆ ಯಾವುದೇ ಜಲಸಾಹಸ ಅಥವಾ ಮನೋರಂಜನಾ ಕ್ರೀಡೆಗಳು ಇರಲಿಲ್ಲ. ಕೆಲ ವರ್ಷಗಳ ಹಿಂದಷ್ಟೇ ಇಲ್ಲಿ ವಾಟರ್ ಗೇಮ್ಸ್ ಗಳನ್ನು ಆರಂಭಿಸಲಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿತ್ತು. ಇಲ್ಲಿ ಕಳೆದ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆದು ಬೇರೆ ಬೇರೆಯವರಿಗೆ ವಿವಿಧ ವಾಟರ್ ಗೇಮ್ಸ್ ಗಳನ್ನು ನಡೆಸಲು ಗುತ್ತಿಗೆ ನೀಡಿತ್ತು.

ಜಸ್ಕಿ, ಬನಾನ ರೈಡ್, ಬಂಪರ್ ರೈಡ್, ಸ್ಪೀಡ್ ಬೋಟ್, ಎ ಟಿವಿ ಬೈಕ್ ರೈಡ್, ಕುದುರೆ ಸವಾರಿ ಸಹಿತ ಹೆಚ್ಚಿನ ಎಲ್ಲ ಬೋಟುಗಳ ಜಲಸಾಹಸ ಕ್ರೀಡೆಗಳು ಇಲ್ಲಿದ್ದವು. ಕಳೆದ ವರ್ಷ ಸ್ಕೈ ಡೈನಿಂಗ್ ಸಹ ಇತ್ತು. ಆದರೆ ಈ ಬಾರಿ ಅದೂ ಸಹ ಇಲ್ಲವಾಗಿದೆ. ಹೊರಗಡೆಯ ಪ್ರವಾಸಿಗರು ಮಾತ್ರವಲ್ಲದೆ ವಾರಾಂತ್ಯಗಳು, ರಜಾ ದಿನಗಳಲ್ಲಿ, ಸಂಜೆಯ ವೇಳೆ ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆಗಳಿಂದ ಆಗಮಿಸುವ ಪ್ರವಾಸಿಗರು ಸಹ ಇಲ್ಲಿ ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಪ್ರವಾಸೋದ್ಯಮ ಇಲಾಖೆಯಿಂದ ತ್ರಾಸಿ-ಮರವಂತೆ ಬೀಚ್ ನಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲು ಎರಡೆರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಕೂಡ ಆಸಕ್ತಿ ತೋರಿಸದ ಕಾರಣ, ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕಾಗಿದೆ. ಆದರೆ ಟೆಂಡರ್ ಗೆ ವರ್ಷಕ್ಕೆ 20 ಲಕ್ಷ ರೂ. ಹಣ ನಿಗದಿಪಡಿಸಿರುವುದು ದುಬಾರಿಯಾಗಿದ್ದು, ಇಲ್ಲಿರುವುದು ಬರೀ ಶೌಚಾಲಯ, ಪಾರ್ಕಿಂಗ್ ಮಾತ್ರ. ಅದಕ್ಕೆ ಇಷ್ಟೊಂದು ಹಣ ಯಾಕೆ? ಅನ್ನುವುದು ವಾಟರ್ ಗೇಮ್ಸ್ ಗುತ್ತಿಗೆ ಪಡೆಯುವವರೊಬ್ಬರ ವಾದವಾಗಿದೆ.

ವಿಶಿಷ್ಟವಾದ ತ್ರಾಸಿ-ಮರವಂತೆ ಬೀಚ್ ಸಹಜ ಸೊಬಗಿನ ಪ್ರಾಕೃತಿಕ ಸೌಂದರ್ಯದಿಂದ ಪ್ರಸಿದ್ಧಿಯಾಗಿದೆ. ವಿಶಾಲವಾದ ಅರಬ್ಬಿ ಸಮುದ್ರ, ಇನ್ನೊಂದೆಡೆ ಸೌಪರ್ಣಿಕಾ ನದಿಯ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66. ಇಂತಹ ಅದ್ಭುತ ದೃಶ್ಯವು ದೇಶದ ಬೇರೆ ಕಡೆ ಇಲ್ಲ. ರಾಜ್ಯದ ಸುಂದರ ಬೀಚ್ ಎಂದು ಕರೆಯುವ ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಸೌಂದರ್ಯವನ್ನು ನೋಡಿ ಆನಂದಿಸುವ ಜತೆಗೆ ಮನೋರಂಜನೆಗೆ, ಸಮಯ ಕಳೆಯಲು ಕೆಲವು ಜಲಸಾಹಸ ಕ್ರೀಡೆಗಳಿದ್ದರೆ ಇನ್ನಷ್ಟು ಜನರನ್ನು ಆಕರ್ಷಿಸಬಹುದು. ಇಲ್ಲದಿದ್ದರೆ ಪ್ರವಾಸಿಗರಿಗೆ ಇಲ್ಲಿ ಬಂದು ಕುಳಿತು, ಬರೀ ನೋಡುವುದಕ್ಕಷ್ಟೇ ಸೀಮಿತವಾಗಲಿದೆ ಅನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ.

‘ತ್ರಾಸಿ-ಮರವಂತೆ ಬೀಚ್ ನಲ್ಲಿ ಪ್ರವಾಸಿಗರಿಗೆ ಮನೋರಂಜನೆ ನೀಡುವಂತಹ ವಾಟರ್‌ ಗೇಮ್ಸ್ ಸುರಕ್ಷತೆಯೊಂದಿಗೆ ಶೀಘ್ರ ಆರಂಭವಾಗಬೇಕು. ಟೆಂಡರ್ ಹಣ ದುಬಾರಿಯಾಗಿದ್ದು, ಇಲಾಖೆ ಅದನ್ನು ಕಡಿಮೆ ಮಾಡಲಿ. ಅದರೊಂದಿಗೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಯನ್ನು ಕಾಪಾಡಬೇಕು. ಇಲ್ಲಿ ಸ್ವಲ್ಪ ಆಳ ಇರುವುದರಿಂದ ಕಡಲಿಗೆ ಇಳಿಯುವ ಎಲ್ಲರಿಗೂ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು. ಪ್ರವಾಸಿ ಮಿತ್ರರು, ಲೈಫ್ ಗಾರ್ಡ್, ಮುಳುಗು ತಜ್ಞರನ್ನು ಕಡ್ಡಾಯವಾಗಿ ನಿಯೋಜಿಸಬೇಕು.

- ಮಿಥುನ್ ದೇವಾಡಿಗ, ಅಧ್ಯಕ್ಷರು, ತ್ರಾಸಿ ಗ್ರಾಪಂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News