(ಹರೀಶ್)

ಕುಂದಾಪುರ, ಅ.15: ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂ ಸ್ಟೇಗೆ ನಿರಪೇಕ್ಷಣಾ (ಎನ್ ಒಸಿ) ಪತ್ರ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಕಚೇರಿಯ ವಿಎ ಹರೀಶ್ ಎಸ್. ಎಂಬಾತನನ್ನು ಗುರುವಾರ ಸಂಜೆ ಕಚೇರಿಯಲ್ಲಿದ್ದಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸುರೇಶ್ ಎಂಬವರು ನೀಡಿದ ದೂರಿನಂತೆ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದರು.

ಹೋಂ ಸ್ಟೇಗೆ ಎನ್ಒಸಿ ನೀಡಲು 5 ಸಾವಿರ ರೂ. ಲಂಚವನ್ನು ಕೇಳಿದ್ದು, ಅದನ್ನು ಗೂಗಲ್ ಪೇ ಮೂಲಕ ಹಾಕುವಂತೆ ತಿಳಿಸಿದ್ದು, ಅದರಂತೆ ಇವರು ಕಳುಹಿಸಿದ್ದಾರೆ. ಆ ದಾಖಲೆಯೊಂದಿಗೆ ಹಣ ಹಾಕಲು ಹೇಳಿದ ಮೊಬೈಲ್ ಕರೆಯ ವಾಯ್ಸ್ ರೆಕಾರ್ಡ್ ಮೂಲಕ ಖಚಿತಪಡಿಸಿಕೊಂಡ ಪೊಲೀಸರು ಆರೋಪಿಯ ಬಂಧನ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನ, ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಾಜೇಂದ್ರ ನಾಯ್ಕ್ ನೇತೃತ್ವದಲ್ಲಿ ಸಿಬಂದಿಯಾದ ರಾಘವೇಂದ್ರ, ನಾಗರಾಜ್, ಅರುಣ್, ಅಬ್ದುಲ್ ಜಲಾಲ್, ರವೀಂದ್ರ, ಆದರ್ಶ, ರಾಘವೇಂದ್ರ ಹೊಸ್ಕೋಟೆ ಹಾಗೂ ಸೂರಜ್ ಅವರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ, ಇನ್ನಷ್ಟು ಮಾಹಿತಿ ಕಲೆಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor