ಕುಂದಾಪುರ | ಧನಾತ್ಮಕ ಚಿಂತನೆಯಿಂದ ಉತ್ತಮ ಆರೋಗ್ಯ: ಮೋಹನ್ ದಾಸ್ ಪೈ
ಕುಂದಾಪುರ, ಡಿ.7: ಯಾವುದೇ ಸಂದರ್ಭದಲ್ಲಿ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಅದರಿಂದ ನಮ್ಮ ಬೆಳವಣಿಗೆಯೂ ಸಾಧ್ಯ. ಉತ್ತಮ ಆರೋಗ್ಯಕ್ಕೂ ಇದು ಪೂರಕ. ಜೀವನದಲ್ಲಿ 60 ಅಂಚಿಗೆ ತಲುಪುವಾಗ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿದ್ದು, ಅದನ್ನೆಲ್ಲ ತೊಡೆದು ಹಾಕಲು ಧನಾತ್ಮಕ ಚಿಂತನೆಯೇ ಉತ್ತಮ ಮಾರ್ಗ ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಮುಖ್ಯಸ್ಥ ಮೋಹನ್ ದಾಸ್ ಪೈ ಹೇಳಿದ್ದಾರೆ.
ಕುಂದಾಪುರ ಶೆರೋನ್ ಹೋಟೆಲಿನ ಸಭಾಂಗಣದಲ್ಲಿ ಶನಿವಾರ ನಡೆದ ಭಂಡಾರ್ಕಾರ್ಸ್ ಕಾಲೇಜಿನ 1984-85ರ ಬಿ.ಕಾಂ. ವಿದ್ಯಾರ್ಥಿಗಳು 40 ವರ್ಷಗಳ ಬಳಿಕ ಒಟ್ಟು ಸೇರಿದ ಸ್ನೇಹ ಪುನರ್ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ನಿವೃತ್ತ ಉಪನ್ಯಾಸಕ ಶಾಂತರಾಮ ಶುಭಹಾರೈಸಿದರು. ಕಾರ್ಯಕ್ರಮ ಸಂಘಟಕರಾದ ಮಂಜುನಾಥ ಸೇಲಂ, ಓಸ್ಲಿನ್ ರೆಬೆಲ್ಲೋ, ಗಂಗಾಧರ ಆಚಾರ್ಯ, ನಾಗರಾಜ ಶೇರಿಗಾರ್, ಜಗನ್ನಾಥ ಪುತ್ರನ್, ಪ್ರಕಾಶ ಬಾಳಿಗ, ಭಾಸ್ಕರ್ ಶೆಟ್ಟಿ, ಎಸ್.ವಿ.ಅರುಣ್, ಲೋಲಿಟಾ ಕಾಡ್ರಸ್, ರಘುರಾಮ ಶೆಟ್ಟಿ, ಪೂರ್ಣಿಮಾ, ಸೂರ್ಯ ಪ್ರಕಾಶ್, ಅಶೋಕ್ ಬಿ., ರಮೇಶ್ ಮಂಜು, ವಸಂತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಈಗ ವಿವಿಧೆಡೆಗಳಲ್ಲಿ ಬದುಕು ಕಟ್ಟಿಕೊಂಡಿರುವ 1984 -85ರ ಸಾಲಿನ ಬಿ.ಕಾಂ. ಪದವಿ ತರಗತಿಯ ಎ ಮತ್ತು ಬಿ ವಿಭಾಗದ ನೂರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಈ ಸ್ನೇಹ ಪುನರ್ ಸಮ್ಮಿಲನದಲ್ಲಿ ಪಾಲ್ಗೊಂಡು, ಬಳಿಕ ಕಾಲೇಜಿನ ಆಗಿನ ತರಗತಿ ಕೋಣೆಗೂ ತೆರಳಿ, ಅಲ್ಲಿ ಮಕ್ಕಳಾಗುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕುವ ಮೂಲಕ ಸಂಭ್ರಮಿಸಿದರು. ಸ್ನೆಹಿತರು ಹಾಗೂ ಅವರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.
1984-85ರ ಬ್ಯಾಚಿನ ಬಿಕಾಂ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕ ಕೃಷ್ಣಾನಂದ ಚಾತ್ರ ಸ್ವಾಗತಿಸಿದರು. ರಾಜೀವ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್ ಪಾಯಸ್ ವಂದಿಸಿದರು. ಪ್ರಭಾಕರ ಕುಂಭಾಶಿ ಕಾರ್ಯಕ್ರಮ ನಿರೂಪಿಸಿದರು.