×
Ad

ಕುಂದಾಪುರ ಯುಜಿಡಿ ಸಮಸ್ಯೆ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ; ಸಾರ್ವಜನಿಕರೊಂದಿಗೆ ಚರ್ಚೆ

Update: 2025-12-11 20:53 IST

ಕುಂದಾಪುರ, ಡಿ.11: ಸುಮಾರು 11 ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ಯುಜಿಡಿ ಕಾಮಗಾರಿಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿವೆ ಎಂಬ ದೂರಿಗೆ ಸ್ಪಂದಿಸಿರುವ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ಥಳ ಪರಿಶೀಲನೆಗಾಗಿ ಗುರುವಾರ ಕುಂದಾಪುರದ ಪುರಸಭಾ ವ್ಯಾಪ್ತಿಯ ಹುಂಚಾರಬೆಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಂಚಾರುಬೆಟ್ಟು ಎಂಬಲ್ಲಿ ನಿರ್ಮಿಸಲುದ್ದೇಶಿಸಿರುವ ಯುಜಿಡಿ ಕಾಮಗಾರಿಯ ಎಸ್‌ಟಿಪಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದ ಬಳಿಕ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಕರೆದ ಸಭೆಯಲ್ಲಿ ಯುಜಿಡಿ ಕಾಮಗಾರಿ, ಎಸ್‌ಟಿಪಿ ರಚನೆ ಸಮಸ್ಯೆಗಳ ಕುರಿತಂತೆ ಸಾಕಷ್ಟು ಪ್ರಸ್ತಾಪಗಳು ಕೇಳಿಬಂದವು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಹುಂಚಾರಬೆಟ್ಟು ಎಂಬಲ್ಲಿನ ಜನನಿಬೀಡ ಪ್ರದೇಶದಲ್ಲಿ ಯುಜಿಡಿ ಕಾಮಗಾರಿ ಎಸ್ಟಿಪಿ ಘಟಕ ತೆರೆಯುವುದು ಸೂಕ್ತವಲ್ಲ. ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡುವುದಕ್ಕೆ ವಿರೋಧವಿಲ್ಲ. ಆದರೆ ಜನವಸತಿ ಪ್ರದೇಶಕ್ಕಿಂತ 500 ಮೀ. ದೂರದಲ್ಲಿ ನಿರ್ಮಿಸಿದಲ್ಲಿ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಯುಜಿಡಿ ಕಾಮಗಾರಿ ಅನುಷ್ಠಾನದ ಸಮಯದಿಂದಲೂ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ತರಾತುರಿ ನಿರ್ಧಾರಗಳು ಜನರನ್ನು ಹೈರಾಣಾಗಿಸಿದೆ ಎಂದವರು ಸ್ಥಳೀಯರ ಅಭಿಪ್ರಾಯಗಳನ್ನು ಜಿಲ್ಲಾಡಳಿತದ ಮುಂದಿರಿಸಿದರು.

ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ್ ಖಾರ್ವಿ ಮಾತನಾಡಿ, 23 ವಾರ್ಡ್‌ಗಳ ತ್ಯಾಜ್ಯದ ನೀರನ್ನು ಪಂಚಗಂಗಾವಳಿ ಹೊಳೆಗೆ ಬಿಡಲಾಗುತ್ತಿದ್ದು, ಆ ವಾರ್ಡ್‌ನಿಂದ ಗೆದ್ದು ಸ್ಥಳೀಯ ಜನರ ಕಷ್ಟಕ್ಕೆ ಸ್ಪಂದಿಸಲಾಗದೆ, ಉತ್ತರವನ್ನೂ ನೀಡಲಾಗುತ್ತಿಲ್ಲ. ಸಮಸ್ಯೆಗಳನ್ನು ತಕ್ಷಣ ಸರಕಾರ, ಜಿಲ್ಲಾಡಳಿತ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಮಾಜಿ ಪುರಸಭಾ ಸದಸ್ಯ ಶ್ರೀಧರ್ ಮಾತನಾಡಿ, ಯುಜಿಡಿ ಕಾಮಗಾರಿ ಸಲುವಾಗಿ ಅಗೆದ ರಸ್ತೆಗಳು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು. ಮಾಜಿ ಸದಸ್ಯೆ ದೇವಕಿ ಸಣ್ಣಯ್ಯ, ನಾಗರಿಕರಾದ ಸುನೀಲ್ ಪೂಜಾರಿ ಕೋಡಿ ಯುಜಿಡಿ ಕಾಮಗಾರಿಯಿಂದ ಆಗುತ್ತಿರುವ ವಿವಿಧ ಸಮಸ್ಯೆಗಳ ಕುರಿತಂತೆ ಮಾತನಾಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಕುಂದಾಪುರದ 23 ವಾರ್ಡ್‌ಗಳ ಪೈಕಿ 5-6 ವಾರ್ಡ್‌ಗಳನ್ನು ಯುಜಿಡಿ ಯೋಜನೆ ಇನ್ನೂ ತಲುಪಿಲ್ಲ. ಹಾಗಿದ್ದರೆ ಎಲ್ಲ ವಾರ್ಡ್, ಎಲ್ಲ ಮನೆಗಳನ್ನು ಇದು ತಲುಪುವ ಬಗೆ ಹೇಗೆ ಎಂದು ಪ್ರಶ್ನಿಸಿದರಲ್ಲದೇ, ಲಭ್ಯ ಅನುದಾನದಲ್ಲಿ ಕಾಮಗಾರಿ ಮಾಡಬೇಕಿದೆ. ಹುಂಚಾರಬೆಟ್ಟಿನಲ್ಲಿ ಎಸ್ಟಿಪಿ ನಿರ್ಮಾಣಕ್ಕೆ ವಿರೋಧ ಇದೆ. ಪುರಸಭೆ ವ್ಯಾಪ್ತಿಯ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕರು, ಯುಜಿಡಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ. ಮಾತನಾಡಿ, ಪುರಸಭೆ ವ್ಯಾಪ್ತಿಗೊಳಪಡುವ ಮೂರು ವಿದ್ಯಾರ್ಥಿನಿಲಯಗಳ ತ್ಯಾಜ್ಯಗಳನ್ನು ಅಂಬೇಡ್ಕರ್ ನಗರದ ಕಾಲನಿ ಬಳಿ ಬಿಡುತ್ತಿದ್ದು, ಇಡೀ ನಗರ ಸ್ವಚ್ಚಗೊಳಿಸುವ ಪೌರಕಾರ್ಮಿಕರ ಕುಟುಂಬಕ್ಕೆ ಹೀಗಾದರೆ ಹೇಗೆ ಎಂದು ಅಲ್ಲಿನ ಸಮಸ್ಯೆಯ ಗಂಭೀರತೆಯನ್ನು ಸಭೆಯ ಮುಂದಿಟ್ಟರು.

ದಸಂಸ ಮುಖಂಡ ವಿಜಯ್ ಕೆ.ಎಸ್. ಮಾತನಾಡಿ, ಕುಂದಾಪುರ ಅಂಬೇಡ್ಕರ್ ಭವನ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ದುರಸ್ಥಿಮಾಡಿ ಎಂದು ಆಗ್ರಹಿಸಿದರು. ಕೊಲ್ಲೂರಿನಿಂದ ಬಂದ ವಿಶೇಷಚೇತನ ಮಹಿಳೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡರು.

ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News