ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರದ ಪಿಡುಗನ್ನು ನಿರ್ಮೂಲನ ಮಾಡೋಣ: ನ್ಯಾ.ಅಬ್ದುಲ್ ರಹೀಮ್
ಕುಂದಾಪುರ: ಸಮಾಜದ ಋಣ ನಮ್ಮ ಮೇಲಿದ್ದು, ಭ್ರಷ್ಟಾಚಾರ ತೊಲಗಿಸದಿದ್ದರೆ ದೇಶ ಮತ್ತು ಸಮಾಜ ಅಭಿವೃದ್ಧಿ ಆಗು ವುದಿಲ್ಲ. ಜನರಿಗೂ ಕಾನೂನಿನ ಅರಿವಿರಬೇಕು. ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲ ಮಾಡಿ ದೇಶದ ಅಭಿವೃದ್ಧಿಗೆ ಕಟಿಬದ್ದರಾಗಬೇಕು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಕರೆ ನೀಡಿದ್ದಾರೆ.
ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ ಮತ್ತು ತಾಲೂಕು ಆಡಳಿತ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರು ಪುಣ್ಯವಂತರು, ಆದರೆ ಅಧಿಕಾರ ದುರುಪಯೋಗ ಮಾಡಿಕೊಳ್ಳ ಬಾರದು. ಭ್ರಷ್ಟಾಚಾರಕ್ಕೆ ಆತ್ಮಬಲ ಮದ್ದು. ಪ್ರಾಮಾಣಿಕ ಅಧಿಕಾರಿಗಳ ಹೆಸರು ಬಳಸಿಕೊಂಡು ಜನರನ್ನು ವಂಚಿಸಿ, ಒಳ್ಳೆಯ ಅಧಿಕಾರಿಗಳ ಹೆಸರು ಹಾಳುಮಾಡುವರ ಬಗ್ಗೆ ಸರಕಾರಿ ನೌಕರರು, ಅಧಿಕಾರಿಗಳು ಎಚ್ಚರಿಕೆಯಿಂದಿರಬೇಕು ಎಂದರು.
ಕುಂದಾಪುರ ಹಿರಿಯ ಸಿವಿಲ್ ನ್ಯಾಯಾದೀಶ ರಾಜು ಎನ್. ಕಾನೂನು ಮಾಹಿತಿ ನೀಡಿ, ಸಾಮಾಜಿಕ ಪಿಡುಗಾದ ಭ್ರಷ್ಟಾ ಚಾರ ನಿರ್ಮೂಲನೆಗಾಗಿ ಅನೇಕ ಕಾಯಿದೆ ತಂದರೂ ಸಮಸ್ಯೆ ಇನ್ನೂ ಕಾಡುತ್ತಿದ್ದು ಇದರಿಂದ ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ತೊಡಕಾಗುತ್ತಿದೆ. ಭ್ರಷ್ಟಾಚಾರದ ಅರಿವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ನ್ಯಾಯಾಲಯ ಮಾಡುತ್ತಿದ್ದು, ಸಮಾಜದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸಮಗ್ರ ಅರಿವು ಜಾಗೃತವಾಗಿಬೇಕಿದೆ ಎಂದರು.
ಕುಂದಾಪುರಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಡಿ. ರೋಹಿಣಿ, ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮ ನಾಥ ಹೆಗ್ಡೆ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್.ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ತಾಲೂಕು ಪಂಚಾ ಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜಿ., ಸಹಾಯಕ ಸರ್ಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ ರಾವ್ ಉಪಸ್ಥಿತರಿದ್ದರು.
ವಂಡ್ಸೆ ನಾಡಾ ಕಚೇರಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ಸ್ವಾಗತಿಸಿ, ವಂದಿಸಿದರು.