ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಗೆ 1.04 ಕೋಟಿ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಉಡುಪಿ: ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಗೆ ಕೋಟ್ಯಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಇಕ್ವಿಫ್ಲೆಕ್ಸ್ ಪ್ರೈವೆಟ್ ಕಂಪೆನಿ ಜೊತೆ ಲೀಜ್ ರೂಪದಲ್ಲಿ ಅವರ ಮಿಷಿನರಿ ವಸ್ತುಗಳನ್ನು ಬಳಸುತ್ತಿದ್ದು, ಆ ಲೀಜ್ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸಂಸ್ಥೆಯ ಬ್ಯಾಂಕ್ ಖಾತೆ ಪಾವತಿ ಮಾಡಲಾಗುತ್ತಿತ್ತು. ಈಗಾಗಲೇ ನಾಲ್ಕು ಪಾವತಿಗಳನ್ನು ಮಾಡ ಲಾಗಿದ್ದು ಇದೀಗ 5ನೇ ಕಂತಿನ 1,04,16,229ರೂ. ಹಣವನ್ನು ಪಾವತಿ ಮಾಡಬೇಕಾಗಿದ್ದು, ಅ.11ರಂದು ಇಮೇಲ್ ಒಂದರ ಮೂಲಕ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ಯ ಇ-ಮೇಲ್ ಐಡಿಗೆ ಸಂಪರ್ಕ ಮಾಡಿ ಅ.15ಕ್ಕೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ತಿಳಿಸಲಾಗಿತ್ತು.
ಆದರೆ ಅ.13ರಂದು ಬಂದ ಇಮೇಲ್‌ನಲ್ಲಿ ನಮ್ಮ ಬ್ಯಾಂಕ್ ಖಾತೆ ಬದಲಾಗಿದೆ ನೀವು ನಮ್ಮ ಈ ಖಾತೆಗೆ ಬಾಕಿಯಿರುವ 1,04,16,229ರೂ. ಮೊತ್ತವನ್ನು ಪಾವತಿಸುವಂತೆ ಸಂದೇಶ ಬಂತು. ಅದರಂತೆ ಅ.15ರಂದು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯು 1,04,16,229ರೂ. ಹಣವನ್ನು ಪಾವತಿ ಮಾಡಿತ್ತು.
ಆದರೆ ಅ.29ರಂದು ಇಕ್ವಿಫ್ಲೆಕ್ಸ್ ಪ್ರೈವೆಟ್ ಸಂಸ್ಥೆಯವರು ನಮಗೆ ಹಣ ಸ್ವೀಕೃತವಾಗಿರುವುದಿಲ್ಲ ಎಂದು ತಿಳಿಸಿದ್ದು, ಆಗ ಕಂಪೆನಿಗೆ ಮೋಸ ಹೋಗಿರುವ ಬಗ್ಗೆ ತಿಳಿದು ಬಂತು. ಅಪರಿಚಿತರು ಇಕ್ವಿಫ್ಲೆಕ್ಸ್ ಪ್ರೈವೆಟ್ ಕಂಪೆನಿಯ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಮೂಲಕ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯನ್ನು ಸಂಪರ್ಕಿಸಿ 1,04,16,229ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.