ಡಿ.12, 13ರಂದು ಮಣಿಪಾಲದಲ್ಲಿ ಅಖಿಲ ಭಾರತ ಮುದ್ರಣ ಸಮಾವೇಶ-2025
ಉಡುಪಿ, ಡಿ.10: ಉಡುಪಿ ಜಿಲ್ಲಾ ಮುದ್ರಾಲಯಗಳ ಮಾಲಕರ ಸಂಘದ ಆಶ್ರಯದಲ್ಲಿ ಡಿ.12 ಮತ್ತು 13ರಂದು ಮಣಿಪಾಲದ ಡಾ.ಟಿ.ಎಂ. ಎ.ಪೈ ಪಾಲಿಟೆಕ್ನಿಕ್ ನಲ್ಲಿ ಅಖಿಲ ಭಾರತ ಮುದ್ರಣ ಸಮಾವೇಶ-2025 (ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-25) ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಯು.ಮೋಹನ ಉಪಾಧ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘ, ಡಾ.ಟಿಎಂಎಪೈ ಪಾಲಿಟೆಕ್ನಿಕ್ ಹಾಗೂ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇವುಗಳ ಸಹಯೋಗದಲ್ಲಿ ಎರಡು ದಿನಗಳ ಸಮಾವೇಶ ನಡೆಯಲಿದೆ ಎಂದರು.
ಮುದ್ರಣ ಉದ್ಯಮ ರಂಗಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನ, ಸೆಮಿನಾರ್ ಹಾಗೂ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದ ಮೋಹನ ಉಪಾಧ್ಯ, ಸಮ್ಮೇಳನದಲ್ಲಿ ಮುದ್ರಣಾಲಯಗಳು ಎದುರಿಸುತ್ತಿರುವ ಕೆಲವೊಂದು ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. 18 ಜಿಲ್ಲೆಗಳ ಮುದ್ರಕರು ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಸುಮಾರು 400 ಮಂದಿ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 180 ಮುದ್ರಣಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಮುದ್ರಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಮಣಿಪಾಲದ ಸತೀಶ್ ಯು.ಪೈ ಹಾಗೂ ಮೋಹನ್ ಉಪಾಧ್ಯ ರನ್ನು ಸನ್ಮಾನಿಸಲಾಗುವುದು. ಮಣಿಪಾಲ ಮೀಡಿಯ ನೆಟ್ವರ್ಕ್ ನ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು.ಪೈ ಅವರು ಸಮಾವೇಶವನ್ನು ಡಿ.12ರ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಡಿ.13ರ ಅಪರಾಹ್ನ 12:00ಗಂಟೆಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಂ.ಮಹೇಶ್ ಕುಮಾರ್, ಸಹ ಸಂಚಾಲಕ ಅಶೋಕ್ ಶೆಟ್ಟಿ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಮೇಶ್ ತಿಂಗಳಾಯ, ಸಂಘದ ಉಪಾಧ್ಯಕ್ಷ ಹಾಗೂ ಪ್ರಚಾರ ಸಮಿತಿ ಸಂಚಾಲಕ ಜಿ.ಎಂ.ಶರೀಫ್, ಮುದ್ರಕರ ಸೌಹಾರ್ದ ಸಹಕಾರಿ ಬಿ.ಜಿ.ಸುಬ್ಬರಾವ್, ಉಪಾಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.