×
Ad

ಕೋಡಿಬೆಂಗ್ರೆ ಪ್ರವಾಸಿ ದೋಣಿ ದುರಂತ ಪ್ರಕರಣ: ದೋಣಿ ಮಾಲಕ ಸಹಿತ ಮೂವರ ಬಂಧನ

Update: 2026-01-31 19:21 IST

ಉಡುಪಿ: ಕೋಡಿಬೆಂಗ್ರೆ ಅಳಿವೆಬಾಗಿಲಿನಲ್ಲಿ ಆರು ದಿನಗಳ ಹಿಂದೆ ಸಂಭವಿಸಿದ ಪ್ರವಾಸಿ ದೋಣಿ ದುರಂತಕ್ಕೆ ಸಂಬಂಧಿಸಿ ದೋಣಿ ಮಾಲಕ ಸಹಿತ ಮೂವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಕೋಡಿಬೇಂಗ್ರೆಯ ನಿವಾಸಿಗಳಾದ ಸುಹಾಸ್ ಶ್ರೀಯಾನ್ (23), ಸುಫಿಯಾನ್ (20), ವಾಸು ಮೆಂಡನ್(52) ಬಂಧಿತ ಆರೋಪಿಗಳು. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜ.26ರಂದು ಆರೋಪಿ ಸುಹಾಸ್ ಮೈಸೂರಿನಿಂದ ಬಂದ 29 ಮಂದಿ ಪ್ರವಾಸಿಗರನ್ನು ಎರಡು ದೋಣಿಗಳಲ್ಲಿ ಸಮುದ್ರ ವಿಹಾರಕ್ಕೆ ಕಳುಹಿಸಿದ್ದನು. ಇದರಲ್ಲಿ ಒಂದು ದೋಣಿಯು ಅದರ ಚಾಲಕರಾದ ಸೂಫಿಯಾನ ಮತ್ತು ವಾಸು ಎಂಬವರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕೋಡಿಬೇಂಗ್ರೆ ಅಳಿವೆಬಾಗಿಲಿನ ಸ್ವರ್ಣ ನದಿಯಲ್ಲಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ದೋಣಿಯಲ್ಲಿದ್ದ ಇಬ್ಬರು ಯುವತಿಯರು ಸಹಿತ ಮೂವರು ಮೃತಪಟ್ಟು, ಉಳಿದ 11 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೋಟಿಗೆ ಅನುಮತಿ ಇಲ್ಲ: ಈ ಬಗ್ಗೆ ತನಿಖೆ ನಡೆಸಿದಾಗ ಬೋಟ್ ವಿಹಾರಕ್ಕೆ ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವುದು ಕಂಡುಬಂದಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಅಲ್ಲದೇ ಈ ಘಟನೆಗೆ ಕಾರಣವಾದ ಬೋಟ್ ಪ್ರವಾಸೋದ್ಯಮದಲ್ಲಿ ಪ್ರವಾಸಿಗರ ವಿಹಾರಕ್ಕೆ ಸೂಕ್ತವಾಗಿದೆ ಎಂಬ ಬಗ್ಗೆ ಯಾವುದೇ ಧೃಢೀಕೃರಣ ಪತ್ರವನ್ನು ಹೊಂದದೇ ಇರುವುದು ಕಂಡುಬಂದಿದೆ. ಈ ಬೋಟ್ ಪ್ರವಾಸಿಗರ ವಿಹಾರಕ್ಕೆ ಸೂಕ್ತವಾಗಿರುವ ಬೋಟ್ ಕೂಡ ಅಲ್ಲವೆಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದು ಕೊಂಡು ಹೋಗುವಾಗ ಲೈಫ್ ಜಾಕೆಟ್‌ನಂತಹ ಯಾವುದೇ ಮಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಕೂಡ ತನಿಖೆಯಲ್ಲಿ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ನಡೆದ ಸ್ಥಳವು ಕೋಟ ಠಾಣೆ ವ್ಯಾಪ್ತಿಗೆ ಬರುವುದರಿಂದ ಈ ಪ್ರಕರಣವನ್ನು ಮಲ್ಪೆ ಠಾಣೆಯಿಂದ ಕೋಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅದರಂತೆ ಕೋಟ ಠಾಣೆಯಲ್ಲಿ ಈ ಘಟನೆಯು ಆರೋಪಿಗಳ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ನಡೆದಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News