×
Ad

ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಹಂದಿಗಳ ಸಾಮೂಹಿಕ ಸಾವು ! : ಕುಂದಾಪುರ, ಬೈಂದೂರಿನ ಜನತೆಯಲ್ಲಿ ಆತಂಕ

Update: 2026-07-03 18:32 IST

ಕುಂದಾಪುರ : ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕಾಡಂಚಿನಲ್ಲಿರುವ ಅನೇಕ ಗ್ರಾಮಗಳಲ್ಲಿ ಕಳೆದ ಕೆಲದಿನಗಳಿಂದ ಕಾಡು ಹಂದಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗುತ್ತಿವೆ. ಸಾಕಷ್ಟು ಸಂಖ್ಯೆಯಲ್ಲಿ ಹಂದಿಗಳು ಸಾವನ್ನಪ್ಪುತ್ತಿರುವುದರಿಂದ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.

ನಾಡ ಗ್ರಾಮದ ರಾಮನಗರ, ಕೆಂಬೈಲು, ತೆಂಕಬೈಲು, ಸೇನಾಪುರದ ಶಿವನಗರ, ಆಲೂರು ಗ್ರಾಮದ ಸಸಿಹಿತ್ಲು, ಆಸ್ಪತ್ರೆ ವಠಾರ, ಕಾಳಿಕಾಂಬಾ ನಗರ, ವಂಡ್ಸೆ, ಹಕ್ಲಾಡಿಯ ಕುಂದಬಾರಂದಾಡಿ, ಆಜ್ರಿ, ಚಿತ್ತೂರು, ಇಡೂರು ಕುಂಜ್ಞಾಡಿ, ಕೊಲ್ಲೂರು ಗ್ರಾಮದ ಕಾಡು ಪ್ರದೇಶಗಳಲ್ಲಿ ಈ ರೀತಿ ಕಾಡುಹಂದಿಗಳು ಅಲ್ಲಲ್ಲಿ ಸಾವನ್ನಪ್ಪುತ್ತಿರುವುದು ವರದಿಯಾಗಿದೆ.

ಆತಂಕದಲ್ಲಿ ಜನರು :

ಕರಾವಳಿಯ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಡುಹಂದಿಗಳನ್ನು ಜನರು ಬೇಟೆಯಾಡಿ ಮಾಂಸಕ್ಕಾಗಿ ಬಳಸುತ್ತಾರೆ. ಈ ಕಾಡುಹಂದಿಗಳು ಕೃಷಿಕರಿಗೆ, ಅದರಲ್ಲೂ ಭತ್ತದ ಕೃಷಿಗಂತೂ ತುಂಬಾ ತೊಂದರೆ ಕೊಡುತ್ತವೆ. ಇಲ್ಲಿನ ಕೃಷಿಕರ ಪಾಲಿಗೆ ಕಾಡುಹಂದಿಗಳು ಸದಾ ತಲೆನೋವು. ಆದರೆ ಈಗ ಅದೇ ಕಾಡುಹಂದಿಗಳು ಈ ರೀತಿಯಾಗಿ ಅಸ್ವಾಭಾವಿಕ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ರೈತರಲ್ಲೂ ಆತಂಕ ಮೂಡಿಸಿದೆ.

ಕಾಡುಹಂದಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಉಳ್ಳ ಗಟ್ಟಿಯಾದ ದೇಹ ರಚನೆ ಹೊಂದಿರುವ ಪ್ರಾಣಿಗಳು. ಆದರೆ ಅವುಗಳು ಕೂಡ ಹೀಗೆ ದಿಢೀರ್ ಆಗಿ ಕೆಲವೆಡೆ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗುತ್ತಿರುವುದು ಕಾಡಿನ ಅಂಚಿನ ಗ್ರಾಮಗಳ ನಿವಾಸಿಗರ ಆತಂಕಕ್ಕೆ ಕಾರಣವಾಗಿವೆ. ಇದಕ್ಕೆ ವಿಷಪ್ರಾಶನ ಕಾರಣವಾಗಿರಬಹುದೇ ಎಂಬ ಸಂಶಯ ಅವರನ್ನು ಕಾಡುತ್ತಿದೆ.

ಈ ಕಾಡುಹಂದಿಗಳು ಸಾವನ್ನಪ್ಪುತ್ತಿರುವುದು, ಕೊಳೆತು ಕೆಲದಿನದ ಬಳಿಕವಷ್ಟೇ ವಿಪರೀತ ದುರ್ನಾತದಿಂದ ತಿಳಿಯುತ್ತಿದೆ. ಅದರಲ್ಲೂ ಯಾರಾದ್ದದ್ದರೂ ಮನೆ ಸಮೀಪ ಸತ್ತಿದ್ದರೇ ಅಲ್ಲಿ ಇರಲಾದಷ್ಟು ದುರ್ನಾತ ಬರುತ್ತಿದೆ ಎಂದು ಹಲವು ಮನೆಯವರು ದೂರುತಿದ್ದಾರೆ. ಜನರು ಇದರ ದುರ್ನಾತಕ್ಕೆ ಹೈರಾಣಾಗಿ ಹೋಗಿದ್ದಾರೆ.

ಸವಾಲಾದ ಸ್ಯಾಂಪಲ್ ರವಾನೆ :

ಬಹುತೇಕ ಕಾಡು ಹಂದಿಗಳ ಕಳೆಬರಹ ಕೊಳೆತ ಸ್ಥಿತಿಯಲ್ಲಿಯೇ ಪತ್ತೆಯಾಗಿರುವುದರಿಂದ, ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಿದರೂ, ಅದರ ರಕ್ತದ ಮಾದರಿ ಅಥವಾ ದೇಹದ ಅಂಗಾಂಗಗಳ ಸ್ಯಾಂಪಲ್ ಸಂಗ್ರಹಿಸಿ, ಎಫ್‌ಎಸ್‌ಎಲ್ ಲ್ಯಾಬ್ ಗೆ ಕಳುಹಿಸುವುದು ಅರಣ್ಯ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ಹಂದಿಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದರಿಂದ ಮರಣೋತ್ತರ ಪರೀಕ್ಷೆಗಾಗಿ ಅವುಗಳ ಸ್ಯಾಂಪಲ್ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇಲಾಖೆಯ ಸಿಬ್ಬಂದಿಗಳ ಅಳಲು.

ಕೊಳೆತ ಸ್ಥಿತಿಯಲ್ಲಿ ಹಂದಿಗಳ ಮೃತದೇಹ ಸಿಕ್ಕಿರುವುದರಿಂದ ಅವುಗಳ ಸಾವಿಗೆ ನಿಖರ ಕಾರಣ ತಿಳಿಯುವುದು ಸದ್ಯಕ್ಕೆ ಕಷ್ಟವಾಗುತ್ತಿದೆ. ಹಂದಿ ಸಾವನ್ನಪ್ಪಿದ ಮೃತದೇಹ ತಕ್ಷಣಕ್ಕೆ ಸಿಕ್ಕರೆ, ಅದರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಪ್ರಯೋಗಾಲಯಕ್ಕೆ ಎಲ್ಲ ಮಾದರಿಗಳನ್ನು ಕಳುಹಿಸಿ, ಆ ಮೂಲಕ ಹಂದಿಗಳ ಸಾವಿಗೆ ನಿರ್ದಿಷ್ಟ ಕಾರಣ ತಿಳಿಯಬಹುದು. ಪ್ರಾಥಮಿಕ ಶಂಕೆ ಪ್ರಕಾರ ಆಹಾರದಲ್ಲಿ ಏನಾದರೂ ವ್ಯತ್ಯಾಸ (ಆಹಾರದಲ್ಲಿ ವಿಷಪ್ರಾಶನ) ಅಥವಾ ಕಲುಷಿತ ನೀರು ಸೇವಿಸಿ ಈ ರೀತಿ ಹಂದಿಗಳು ಸತ್ತಿರುವ ಸಾಧ್ಯತೆ ಇದ್ದರೂ ಇರಬಹುದು ಎಂದು ಸ್ಥಳೀಯ ಪಶು ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ.

‘ನಾಡ, ಆಲೂರು ಗ್ರಾಮದ ಕೆಲವೆಡೆ ಕಾಡು ಹಂದಿಗಳ ಕೊಳೆತ ಮೃತದೇಹ ಸಿಕ್ಕಿವೆ. ಆದರೆ ಈವರೆಗೆ ಕಾಡು ಹಂದಿಗಳ ಸಾಮೂಹಿಕ ಸಾವಿನ ಬಗ್ಗೆ ಅಧಿಕೃತವಾಗಿ ಯಾವುದೇ ದಾಖಲೆ ಇಲ್ಲ. ಕಾಡು ಹಂದಿಗಳ ಮೃತದೇಹ ಕಂಡು ಬಂದಲ್ಲಿ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿ.

-ರಾಘವೇಂದ್ರ ನಾಯ್ಕ್, ಆರ್‌ಎಫ್‌ಒ, ಕುಂದಾಪುರ ವಲಯ.

‘ಸ್ಯಾಂಪಲ್ ಸಿಕ್ಕಿದಲ್ಲಿ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ (ಐಎಹೆಚ್ ಆ್ಯಂಡ್ ವಿಬಿ)ಗೆ ಕಳುಹಿಸಲಾಗುವುದು. ಅದರಿಂದ ವೈರಸ್‌ನಿಂದ ಕಾಡುಪ್ರಾಣಿಗಳಿಗೆ ಬರುವ ಗರಳೆ ರೋಗ, ಆಫ್ರಿಕನ್ ಸ್ವೈನ್ ಫೀವರ್, ಕ್ಲಾಸಿಕಲ್ ಸ್ವೈನ್ ಫೀವರ್ ಅಥವಾ ವಿಷ ಪ್ರಾಶನದಿಂದ ಸಾವನ್ನಪ್ಪಿರಬಹುದೇ ಎಂಬುದನ್ನು ಪತ್ತೆ ಹಚ್ಚಬಹುದು. ವರದಿ ಬಂದ ಬಳಿಕವಷ್ಟೇ ಯಾವ ಕಾರಣದಿಂದ ಸಾವನ್ನಪ್ಪಿರಬಹುದು ಎಂದು ನಿಖರವಾಗಿ ಹೇಳಲು ಸಾಧ್ಯ.

-ಡಾ. ಅರುಣ್ ಕುಮಾರ್ ಹೆಗ್ಡೆ, ಸಹಾಯಕ ನಿರ್ದೇಶಕ, ಪಶು ಪಾಲನಾ ಇಲಾಖೆ ಕುಂದಾಪುರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News