Udupi | ಫ್ಯಾನ್ಸಿ ಅಂಗಡಿಗೆ 13.39 ಲಕ್ಷ ರೂ. ವಂಚನೆ : ಪ್ರಕರಣ ದಾಖಲು
ಉಡುಪಿ : ಉಡುಪಿ ಕಲ್ಸಂಕದ ಟೈಮ್ ಸ್ಕ್ವಾರ್ ಮಾಲ್ ನಲ್ಲಿರುವ ಮಾರ್ಕೇಟ್ 99 ಎಂಬ ಫ್ಯಾನ್ಸಿ ಅಂಗಡಿಗೆ ಸಿಬ್ಬಂದಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಕೇಟ್ 99 ಅಂಗಡಿಯಲ್ಲಿ ನಜೀರ್ ಆಹಮ್ಮದ್ ಖಾಸಿಂ ಖಾನ್ ಎಂಬಾತ ಸಹಾಯಕ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ಬ್ಯಾಂಕ್ ಹಾಗೂ ವ್ಯಾಪಾರ ಹಾಗೂ ನಗದು ನಿರ್ವಹಣಾ ಕರ್ತವ್ಯವನ್ನು ಮಾಡುತ್ತಿದ್ದನು.
ರೆಡಿಯಂಟ್ ಕ್ಯಾಶ್ ಮ್ಯಾನೇಜ್ಮೇಂಟ್ ಸರ್ವೀಸ್ ಪ್ರೈ ಲಿಮಿಟೇಡ್ ಸಂಸ್ಥೆಯವರು ಮಾರ್ಕೇಟ್ 99 ಪರವಾಗಿ ಗ್ರಾಹಕರಿಂದ ಬರಬೇಕಾದ ಹಣವನ್ನು ಸಂಗ್ರಹಿಸಿ ಠೇವಣಿ ಸ್ಲೀಪ್ ಭರ್ತಿ ಮಾಡಿ ನಗದನ್ನು ನಜೀರ್ ಖಾನ್ಗೆ ನೀಡುತ್ತಿದ್ದು 2025ರ ಡಿ.18ರಂದು ಸಂಸ್ಥೆಯ ಆಡಿಟ್ ಮಾಡುವ ಸಂದರ್ಭದಲ್ಲಿ ಹಣಕಾಸು ಲೆಕ್ಕಾಚಾರ ಹೊಂದಾಣಿಕೆ ಬಾರದ ಕಾರಣ 2025ರ ಜು.14ರಿಂದ 2025ರ ಡಿ.15ರವರೆಗೆ ನಜೀರ್ ಖಾನ್ ಜಮಾ ಮಾಡಿದ ಸ್ಲೀಪ್ ಗಳನ್ನು ಪರೀಶೀಲಿಸಲಾಯಿತು.
ಆಗ ಆತ ತಿದ್ದಿ ಬರೆದಿರುವುದು ತಿಳಿದುಬಂದಿದ್ದು, ಆರೋಪಿ ನಝೀರ್ ಖಾನ್ ಒಟ್ಟು 13,39,000ರೂ. ಸಂಸ್ಥೆಗೆ ವಂಚಿಸಿರುವುದು ಕಂಡುಬಂದಿದೆ. ಆರೋಪಿ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಂಸ್ಥೆಗೆ ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.