×
Ad

ಬ್ರಹ್ಮಾವರ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಶಾಸಕ ಯಶ್‌ಪಾಲ್ ಆಗ್ರಹ

Update: 2025-12-29 22:27 IST

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಕೇಂದ್ರವಾಗಿ 8 ವರ್ಷಗಳಾಗಿದ್ದು, ಇಲ್ಲಿನ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಬ್ರಹ್ಮಾವರ ತಾಲೂಕಿನ ಜನತೆಯ ಪರವಾಗಿ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುವುದಾಗಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಜನಸಂಖ್ಯೆ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರವನ್ನು ವಿಲೀನಗೊಳಿಸಿ ತಜ್ಞ ವೈದ್ಯರ ಸೇವೆಯನ್ನು ಮೊಟಕುಗೊಳಿಸಲು ಮುಂದಾಗಿರುವ ಆದೇಶವನ್ನು ಹಿಂಪಡೆಯಬೇಕು ಎಂದವರು ಒತ್ತಾಯಿಸಿದರು.

ಉಡುಪಿ ಜಿಲ್ಲೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗ್ರಾಮೀಣ ಭಾಗದ ಬಡ ಜನತೆಗೆ ಆರೋಗ್ಯ ಸೇವೆ ನೀಡುವ ಪ್ರಾಥಮಿಕ ಮತ್ತು ಆರೋಗ್ಯ ಸಮುದಾಯ ಕೇಂದ್ರವನ್ನು ವಿಲೀನಗೊಳಿಸಿದಲ್ಲಿ ಗ್ರಾಮಸ್ಥರು ಆರೋಗ್ಯ ಸೇವೆಯಿಂದ ವಂಚಿತರಾಗಲಿದ್ದು ಸರಕಾರ ತನ್ನ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಉಂಟಾಗಲಿದೆ ಎಂದರು.

ಸ್ಥಳೀಯ ಮುಖಂಡರಾದ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ ತುರ್ತು ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿಬ್ಬಂದಿಗಳ ಕೊರತೆ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ತಕ್ಷಣ ಸಿಬ್ಬಂದಿಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ, ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಸ್ಥಳೀಯ ಮುಖಂಡರಾದ ರಾಜೀವ್ ಕುಲಾಲ್, ಎಸ್. ನಾರಾಯಣ, ಸುಧೀರ್ ಶೆಟ್ಟಿ, ದೇವಾನಂದ, ಶೋಭಾ ಹಂದಾಡಿ, ಲಕ್ಷ್ಮೀ ಹಾಗೂ ಆರೋಗ್ಯ ಕೇಂದ್ರದ ವೈದ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News