×
Ad

ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ʼನಮ್ಮ ನಡೆ ವಾರ್ಡಿನ ಕಡೆಗೆʼ ಕಾರ್ಯಕ್ರಮ: ರಮೇಶ್ ಕಾಂಚನ್

Update: 2025-12-16 20:35 IST

ಉಡುಪಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯೋಜನೆಯ ಲಾಭವನ್ನು ಸಮಾಜದ ತಳಮಟ್ಟದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ತಲುಪಿಸಬೇಕೆಂಬ ನಿಟ್ಟಿನಲ್ಲಿ ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ‘ನಮ್ಮ ನಡೆ ವಾರ್ಡ್ ಕಡೆಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

ನಗರದ ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿ ವತಿುಂದ ಆಯೋಜಿಸಲಾದ ‘ನಮ್ಮ ನಡೆ ವಾರ್ಡ್ ಕಡೆಗೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿದಾಗ ಮಾತ್ರ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯ. ನಮ್ಮ ನಡಿಗೆ ವಾರ್ಡ್ ಕಡೆಗೆ ಕಾರ್ಯಕ್ರಮದ ಮೂಲಕ ವಾರ್ಡ್ ಮಟ್ಟದಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದವರು ನುಡಿದರು.

ತಳಮಟ್ಟದಲ್ಲಿ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರು ಮಹತ್ವದ ಪಾತ್ರ ವಹಿಸುತಿದ್ದಾರೆ. ವಾರ್ಡ್ ಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಗಳಿಗೆ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ.

ಅವರಿಗೆ ಯೋಜನೆಗಳ ಅರಿವು ಮೂಡಿಸಿ ಅವರನ್ನು ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದ ರಮೇಶ್ ಕಾಂಚನ್, ಈಗಾಗಲೇ ಯೋಜನೆಯ ಫಲಾನುಭವಿಗಳಾಗಿರುವವರಿಗೆ ಸೌಲಭ್ಯ ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳ ಪಟ್ಟಿಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ನ್ಯೂನ್ಯತೆಗಳನ್ನು ಪರಿಹರಿಸಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಒಬ್ಬ ಅರ್ಹ ಫಲಾನುಭವಿ ವಂಚಿತನಾಗದಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ ಎಂದರು.

ಸಮಿತಿ ಸದಸ್ಯರಾದ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಾಸ್ತಾವಿಕ ವಾಗಿ ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದು ಎರಡೂವರೆ ವರ್ಷ ಕಳೆದಿವೆ. ಯೋಜನೆಗಳು ಜಾರಿ ಯಾದಾಗಿನಿಂದಲೂ ಈವರೆಗೆ ಸಮಾಜದ ದುರ್ಬಲರು, ಬಡವರು, ದಲಿತರ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ರಾಜ್ಯದ ಕಟ್ಟಕಡೆಯ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ, ಮನೆಯ ಯಜಮಾನಿಯ ಕೈಗೆ ಶಕ್ತಿ ತುಂಬಲು ಗೃಹಲಕ್ಷ್ಮೀ, ಮಹಿಳೆಯರು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಶಕ್ತಿ ಯೋಜನೆ, ಆರ್ಥಿಕವಾಗಿ ದುರ್ಬಲರಾಗಿ ಕತ್ತಲಲ್ಲಿ ಜೀವನ ನಿರ್ವಹಿಸುತ್ತಿರುವವರ ಬದುಕಿಗೆ ಬೆಳಕಾಗಲು ಗೃಹಜ್ಯೋತಿ ಹಾಗೂ ಯುವಪೀಳಿಗೆಯನ್ನು ಸಶಕ್ತರಾಗಿಸಲು ಯುವನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

ನಮ್ಮ ನಡಿಗೆ ವಾರ್ಡ್ ಕಡೆಗೆ ಕಾರ್ಯಕ್ರಮದ ಮೂಲಕ ಆಶಾ- ಅಂಗನವಾಡಿ ಕಾರ್ಯಕರ್ತೆಯರು ವಾರ್ಡಿನ ಪ್ರತಿಯೊಬ್ಬರ ಮನೆ ಭೇಟಿ ಮಾಡಿ, ಯೋಜನೆಯ ಲಾಭ ದೊರಕುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಅನುಷ್ಠಾನ ಸಮಿತಿ ಸದಸ್ಯರಾದ ಶಬರೀಷ್ ಸುವರ್ಣ, ಈಶ್ವರನಗರ ವಾರ್ಡಿನ ಪ್ರೇಮಲತಾ, ಅರ್ಚನಾ ದೇವಾಡಿಗ, ಸುಧಾಕರ್ ಪೂಜಾರಿ, ಪಂಚ ಗ್ಯಾರಂಟಿ ಯೋಜನೆಯ ಅಧಿಕಾರಿಗಳು, ಆಶಾ- ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News