×
Ad

ಕಲಾವಿದರು ಅಂಕುಡೊಂಕು ತಿದ್ದಿದಾಗ ಸಮಾಜ ಸುಸ್ಥಿರವಾಗಿರಲು ಸಾಧ್ಯ: ಕುಂ.ವೀರಭದ್ರಪ್ಪ

Update: 2023-12-09 17:11 IST

ಕುಂದಾಪುರ: ಕಲಾವಿದರು, ಲೇಖಕರು ಉಪದ್ರವಿಯಾಗಿ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದಾಗಲೇ ಸಮಾಜ ಸುಸ್ಥಿರವಾಗಿರಲು ಸಾಧ್ಯ. ಚಲನಶೀಲ ಸಮುದಾಯಕ್ಕೆ ಉಪದ್ರವೀತನ ಅಗತ್ಯ. ಬೆದರಿಕೆಗಳು ಬಂದಾಗಲೇ ಲೇಖಕ, ಚಿತ್ರಕಾರ ಉತ್ತಮ ಎನಿಸುತ್ತಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಂ. ವೀರಭದ್ರಪ್ಪ ಹೇಳಿದ್ದಾರೆ.

ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಂಪೌಂಡ್ ರೋಟರಿ ಕಲಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳ ಲಾದ ಕಾರ್ಟೂನ್ ಹಬ್ಬ-10 ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾವಿರ ಪುಟಗಳು ನೀಡುವ ವಿವರವನ್ನು ಒಂದು ವ್ಯಂಗ್ಯ ಚಿತ್ರ ನೀಡುತ್ತದೆ. ಮಕ್ಕಳಲ್ಲಿ ವ್ಯಂಗ್ಯ ಚಿತ್ರದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಮಾದರಿ. ಸೃಜನಶೀಲ ಕಲೆಗಳಾದ ಸಂಗೀತ, ಚಿತ್ರಕಲೆ, ಅಭಿನಯ ಮೊದಲಾದ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಲ್ಲಿ ಬಿತ್ತಿದಾಗ ಪ್ರಜ್ಞಾವಂತ ನಾಗರಿಕನಾಗಿ ರೂಪುಗೊಳಿಸ ಬಹುದು. ಜೀವನೋತ್ಸಾಹ, ಹೊಸಹುಮ್ಮಸ್ಸು ಮೂಡಿಸುವ ಕಾರ್ಯ ಮಾಡುತ್ತಿರುವ ವ್ಯಂಗ್ಯಚಿತ್ರಕಾರರಿಗೆ ಪ್ರತಿವರ್ಷ ಒಂದು ರಾಜ್ಯೋತ್ಸವ ಪ್ರಶಸ್ತಿ ಮೀಸಲಿಟ್ಟು ಅವರಿಗೆ ನೀಡುವ ಮೂಲಕ ಪ್ರೋ ಒಂದಷ್ಟು ಮಂದಿ ವ್ಯಂಗ್ಯಚಿತ್ರಕಾರರ ಸಮುದಾಯ ಒಗ್ಗೂಡಿ ಕಳೆದ 10 ವರ್ಷದಿಂದ ಕಾರ್ಟೂನ್ ಹಬ್ಬ ಆಯೋಜಿಸುತ್ತಿರುವುದು ಪ್ರಶಂಸನಾರ್ಹ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯ ಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸಮಾನ ಹಕ್ಕಿದೆ. ಎಲ್ಲರ ಅಭಿಪ್ರಾಯಗಳು ಒಂದೇ ರೀತಿ ಇರುವು ದಿಲ್ಲ. ಸಮಾಜದಲ್ಲಿ ನಡೆಯುವ ಜ್ವಲಂತ ಸಮಸ್ಯೆಗಳಿಗೆ ಅನುಗುಣವಾಗಿ ಅಭಿಪ್ರಾಯ ಹೇಳುವಾಗ ಸಮಸ್ಯೆಗಳು ಮಾಮೂಲಿಯಾಗಿರುತ್ತವೆ. ಯಾರೇ ತಪ್ಪು ಮಾಡಿದರು ನಿಮ್ಮ ಚಿತ್ರಗಳ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸ ಮಾಡುತ್ತಿರುವ ವ್ಯಂಗ್ಯಚಿತ್ರಕಾರರು ಸಮಾಜದ ಆಗುಹೋಗು, ನೋವು- ನಲಿವಿನ ಬಗ್ಗೆ ಚರ್ಚೆಯಾಗುವಂತೆ ಮಾಡುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಅಗತ್ಯ ಚರ್ಚೆಗಳಾಗಬೇಕಾಗಿದೆ ಎಂದರು.

ಡಿವೈಎಫ್‌ಐ ಕರ್ನಾಟಕ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಇಂದಿನ ಪ್ರಭುತ್ವ ಧೋರಣೆ ವಿರುದ್ಧ ದೃಢವಾಗಿ ನಿಂತು ವ್ಯವಸ್ಥೆಯ ಓರೆಕೋರೆ ತಿದ್ದುವಲ್ಲಿ ವ್ಯಂಗ್ಯಚಿತ್ರಕಾರರು ನಿರ್ಭಯವಾಗಿ ಧ್ವನಿ ಎತ್ತುತ್ತಿದ್ದು, ಅವರು ಎಂದಿಗೂ ವಿರೋಧ ಪಕ್ಷ ಆಗಿದ್ದಾರೆ. ಇಂದು ಬಲಾಡ್ಯ ವ್ಯವಸ್ಥೆ ಪ್ರಭುತ್ವ ಕಟ್ಟಿಕೊಂಡಿದ್ದು ಅಂತವರ ವಿರುದ್ಧ ಧ್ವನಿಯೆತ್ತುವುದು ಸುಲಭದ ಮಾತಲ್ಲ ಎಂದು ತಿಳಿಸಿದರು.

ಯುವ ಪೀಳಿಗೆಯನ್ನು ವ್ಯಂಗ್ಯ ಚಿತ್ರದೆಡೆಗೆ ಸೆಳೆಯುವ ಪ್ರಯತ್ನ ಕಾರ್ಟೂನ್ ಹಬ್ಬದ ಮೂಲಕ ಆಗುತ್ತಿದೆ. ಹೋರಾಟ, ದುಡಿಯುವ ವರ್ಗದ ಪರ ಕೆಲಸ ಮಾಡುವವರಿಗೆ ವ್ಯಂಗ್ಯಚಿತ್ರಗಳು ಶಕ್ತಿ. ನಮ್ಮ ಕೆಲ ಹೋರಾಟಗಳು ವ್ಯಂಗ್ಯ ಚಿತ್ರವಾಗಿ ಜನರನ್ನು ತಲುಪಿದ್ದು ಖುಷಿ ವಿಚಾರ. ಈ ನಡುವೆ ಕರಾವಳಿಯ ಬಹುತೇಕ ವ್ಯಂಗ್ಯಚಿತ್ರಕಾರರು ಕೆಲಸ ಕಳೆದುಕೊಂಡಿದ್ದು ನೋವಿನ ಸಂಗತಿ ಎಂದು ಅವರು ಹೇಳಿದರು.

ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಕಾರ್ಟೂನ್‌ಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಸಹಿತ ವಿವಿಧ ಕ್ಷೇತ್ರದಲ್ಲಿ ಪರಿಣಾಮ ಬೀರುವುದಲ್ಲದೆ ಚರ್ಚೆ ಹುಟ್ಟು ಹಾಕುತ್ತದೆ. ಬ್ರಿಟೀಷರು ಕೂಡ ಕಾರ್ಟೂನ್, ಲಾವಣಿಗಳಿಗೆ ಹೆದರಿದ್ದರು ಎಂಬುದು ಇತಿಹಾಸ. ವ್ಯಂಗ್ಯ ಎಂಬುದು ಕರಾವಳಿಯ ಕೆಲವು ಆಚರಣೆ ವೇಳೆ ಬರುವ ಪ್ರಸಂಗಗಳಿವೆ. ಬೇರೆ ಬೇರೆ ವ್ಯವಸ್ಥೆಯಡಿ ವ್ಯಂಗ್ಯ, ಗೆರೆ ಮೂಡಿಸುವ ಪರಿಣಾಮ ಅಗಾಧವಾಗಿದ್ದು ಸಮಾಜವನ್ನು, ವ್ಯಕ್ತಿಗಳನ್ನು ಎಚ್ವರಿಸುವ ಕೆಲಸ ಮಾಡುತ್ತಿದೆ ಎಂದರು.

ನ್ಯೂಸ್ ಮಿನಿಟ್ ಪತ್ರಕರ್ತ ಪ್ರಜ್ಬಲ್ ಭಟ್ ಮಾತನಾಡಿ, ಬದಲಾಗುವ ರಾಜಕಾರಣ ವ್ಯವಸ್ಥೆಯಲ್ಲಿ ಎಚ್ಚರಿಸುವ ಗಂಟೆಯಂತೆ ಕಾರ್ಯನಿರ್ವಹಿಸುವ ವ್ಯಂಗ್ಯ ಚಿತ್ರಗಳ ಪಾತ್ರ ಮಹತ್ತರವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಉದ್ಯಮಿ ಶಶಿಧರ್ ಚೌಟ ಉಪಸ್ಥಿತರಿದ್ದರು. ಕಾರ್ಟೂನ್ ಹಬ್ಬ ಕಾರ್ಯ ಕ್ರಮದ ಸಂಯೋಜಕ, ವೃತ್ತಿಪರ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅತಿಥಿಗಳಿಗೆ ಕ್ಯಾರಿಕೇಚರ್ ನೀಡಿದರು. ಶಿಕ್ಷಣ ತಜ್ಞ ಉದಯ್ ಗಾಂವಕಾರ್ ನಿರೂಪಿಸಿದರು.

‘ಶೇಖರ್ ನಮನ-ಚಿತ್ರನಿಧಿ’ ಉದ್ಘಾಟನೆ

ಇತ್ತೀಚೆಗೆ ನಿಧನರಾದ ಪತ್ರಕರ್ತ ಶೇಖರ್ ಅಜೆಕಾರ್ ಅವರ ಮಕ್ಕಳ ವಿದ್ಯಾಭ್ಯಾಸದ ನೆರವಿಗಾಗಿ ಕಾರ್ಟೂನ್ ಹಬ್ಬದಲ್ಲಿ ’ಶೇಖರ್ ನಮನ-ಚಿತ್ರನಿಧಿ’ ನಡೆಯಿತು.

ಭಂಡಾರ್‌ಕಾರ್ಸ್‌ ಕಾಲೇಜಿನ 1991 ಬ್ಯಾಚ್ ಬಿ.ಕಾಂ ಸಹಪಾಠಿಗಳು, ಕುಂದ ಪ್ರಭ ಪತ್ರಿಕೆ ಹಾಗೂ ಕುಂದಾಪ್ರ ಡಾಟ್ ಕಾಂ ಸಹೋಗದಲ್ಲಿ ಮಿತ್ರವೃಂದದಿಂದ ನಮನ ಸಲ್ಲಿಸಲಾಯಿತು. ಕುಂದಾಪುರದ ಉದ್ಯಮಿ ಶಶಿಧರ್ ಚೌಟ ಅವರಿಗೆ ಕಾರ್ಟೂನ್ ಹಬ್ಬ ಕಾರ್ಯಕ್ರಮದ ಸಂಯೋಜಕ, ವೃತ್ತಿಪರ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಕ್ಯಾರಿಕೇಚರ್ ನೀಡಿ ಚಾಲನೆ ನೀಡಿದರು.

ಕುಂದಾಪುರದ ಹಿರಿಯ ಪತ್ರಕರ್ತ ಯು.ಎಸ್. ಶೆಣೈ ಮಾತನಾಡಿ, ಕ್ರಿಯಾ ಶೀಲ ವ್ಯಕ್ತಿತ್ವದ, ಬರಹಗಾರ ಶೇಖರ್ ಅಜೆಕಾರ್ ಅವರ ಕುಟುಂಬಕ್ಕೆ ಕಾರ್ಟೂನ್ ಹಬ್ಬದ ಮೂಲಕ ಮಾನವೀಯತೆ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.

ವಾರ್ತಾಭಾರತಿ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಮಾತನಾಡಿ, ಶೇಖರ್ ಅಜೆಕಾರ್ ಅನುಪಸ್ಥಿತಿಯಲ್ಲಿಯೂ ಅವರ ಸಕ್ರಿಯ ಚಟುವಟಿಕೆ ಜೀವಂತ. ಅವರ ಕುಟುಂಬಕ್ಕೆ ನೆರವಾಗುವುದು ಹೊಣೆಗಾರಿಕೆ, ಕರ್ತವ್ಯವಾಗಿದೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ವ್ಯಂಗ್ಯ ಚಿತ್ರಗಳಿಗೆ ಸ್ವರ್ಣಯುಗ ಎಂದು ಹೇಳಿದರು.

ಗೋಪಾಲ ತ್ರಾಸಿ, ಗಿರಿಧರ ಕಾರ್ಕಳ, ಸೋಮಶೇಖರ್ ಪಡುಕೆರೆ, ಸುರೇಶ್ ತ್ರಾಸಿ ಮಾತನಾಡಿದರು. 














Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News