×
Ad

ಕೃಷ್ಣನಿಗೆ ಪಾರ್ಥಸಾರಥಿ ಚಿನ್ನದ ರಥ ಸಮರ್ಪಣೆ ಸಂಕಲ್ಪ: ಪರ್ಯಾಯ ಪೀಠವೇರಿದ ಪುತ್ತಿಗೆ ಸ್ವಾಮೀಜಿ ಘೋಷಣೆ

Update: 2024-01-18 19:51 IST

ಉಡುಪಿ: ಇಂದು ಬೆಳಗಿನ ಜಾವ ನಾಲ್ಕನೇ ಬಾರಿಗೆ ಪರ್ಯಾಯ ಪೀಠವೇರಿ ಮಧ್ವರ ಸರ್ವಜ್ಞ ಪೀಠವನ್ನಲಂಕರಿಸಿದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ತಾವು ಸನ್ಯಾಸಾಶ್ರಮ ಸ್ವೀಕರಿಸಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ತನ್ನ ಪರ್ಯಾಯಾವಧಿಯಲ್ಲಿ ಕೃಷ್ಣನಿಗೆ ಪಾರ್ಥಸಾರಥಿ ಚಿನ್ನದ ರಥ ಸಮರ್ಪಿಸುವ ಸಂಕಲ್ಪ ಮಾಡಿದ್ದೇನೆ ಎಂದು ಘೋಷಿಸಿದ್ದಾರೆ.

ಗುರುವಾರ ಮುಂಜಾನೆ ಪರ್ಯಾಯ ಪೀಠಾರೋಹಣ ನಡೆಸಿ ಬಳಿಕ ರಾಜಾಂಗಣದಲ್ಲಿ ನಡೆದ ಸಾರ್ವಜನಿಕ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಪುತ್ತಿಗೆಶ್ರೀಗಳು ಆಶೀರ್ವಚನ ನೀಡಿ ಮಾತನಾಡುವ ವೇಳೆ ಈ ಘೋಷಣೆ ಮಾಡಿದರು.

ಮುಂದಿನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಭಗವಂತನ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ಈ ಅವಧಿಯಲ್ಲಿ ನಾನು ಮಾಡುವುದು ವೈಯಕ್ತಿಕ ಪೂಜೆಯಲ್ಲ. ಜಗತ್ತಿನ ಕಲ್ಯಾಣಕ್ಕಾಗಿ ಮಾಡುವ ಪೂಜೆ ಯಾಗಿರುತ್ತದೆ ಎಂದು ಹೇಳಿದರು.

ಯಾರಾದರೂ ಕೇಳಿದರೆ ವಿದೇಶ ಪ್ರವಾಸಕ್ಕಿಂತ ಕೃಷ್ಣ ಪೂಜೆಯೇ ಮುಖ್ಯ ಎಂದು ನಾನು ಹೇಳುತ್ತೇನೆ. ಈ ಬಾರಿಯ ಪುತ್ತಿಗೆ ಪರ್ಯಾಯ ವಿಶ್ವ ಗೀತಾ ಪರ್ಯಾಯವಾಗಿರಲಿದೆ. ಕಳೆದ ಬಾರಿಯ ಪರ್ಯಾಯ ವೇಳೆ ನವರತ್ನ ರಥ ನಿರ್ಮಿಸಿದ್ದು ಈ ಬಾರಿ ಸುವರ್ಣ ವರ್ಷದಲ್ಲಿ ಚಿನ್ನದ ರಥ ಮಾಡುವ ಸಂಕಲ್ಪ ಮಾಡಿದ್ದು, ಇದರೊಂದಿಗೆ ಕೋಟಿ ಗೀತ ಲೇಖನ ಯಜ್ಞವೂ ನಡೆಯಲಿದೆ. ಇದರೊಂದಿಗೆ ಭಗವದ್ಗೀತೆಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉಡುಪಿ ಯಲ್ಲಿ ಮಾಡುವ ಯೋಜನೆಯೂ ಇದೆ ಎಂದರು.

ದರ್ಬಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಮಾತನಾಡಿ ಉಡುಪಿ ಕೃಷ್ಣ ಮಠ ಸಾಮಾಜಿಕ ವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡ ಕೇಂದ್ರವಾಗಿದ್ದು, ಭವಿಷ್ಯದ ಪೀಳಿಗೆಗೆ ನಮ್ಮ ಆಚಾರವಿಚಾರಗಳನ್ನು ವರ್ಗಾಯಿಸುವ ಕಾರ್ಯಕ್ರಮವೂ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದು ಸಮಾಜವನ್ನು ಜೋಡಿಸುವ, ಸೌಹಾರ್ದತೆಯನ್ನು ಸಮಾಜದಲ್ಲಿ ಮೂಡಿಸುವ ಶಕ್ತಿ ಇರುವುದು ಧಾರ್ಮಿಕ ಕೇಂದ್ರ ಗಳಿಗೆ ಹಾಗೂ ಗುರುಗಳಿಗೆ ಮಾತ್ರ. ಹೀಗಾಗಿ ಮಠಗಳ ಸ್ವಾಮೀಜಿಗಳು ಸಮಾಜಕ್ಕೆ ದಾರಿದೀಪಗಳಾಗಲಿ. ಪುತ್ತಿಗೆ ಶ್ರೀಗಳು ದೇಶ ವಿದೇಶದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಮುಂದೆಯೂ ಅವರು ದೊಡ್ಡ ಮಟ್ಟದಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡಲಿ ಎಂದು ಖಾದರ್ ಹಾರೈಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಮಾತನಾಡಿ ಸುಗುಣೇಂದ್ರ ತೀರ್ಥರು ಕೃಷ್ಣನ ಸಂದೇಶವನ್ನು ವಿದೇಶದಲ್ಲಿ ಪ್ರಸಾರ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ದೇಶದಿಂದ ಹೋಗಿ ಪಶ್ಚಿಮದವರಿಗೆ ಭಾರತಿಯತೆಯ ದರ್ಶನ ಮಾಡಿಸಿದ್ದಾರೆ. ಭಾರತೀಯತೆ ಯನ್ನು ವಿಶ್ವದೆಲ್ಲೆಡೆ ಪಸರಿಸಿ ಗೀತಾ ಸಂದೇಶ ಸಾರಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ ಪೂರ್ವ ಜನ್ಮದ ಪುಣ್ಯದ ಫಲದಿಂದ ಪರ್ಯಾಯದಲ್ಲಿ ಭಾಗಿ ಯಾದ್ದು, ಇದೇ ವೇಳೆ ಅಯೋಧ್ಯೆ ಯಲ್ಲಿ ರಾಮನ ಲೋಕಾರ್ಪಣೆ ಆಗುತ್ತಿದೆ. ಉಡುಪಿಯಲ್ಲಿ ಪುತ್ತಿಗೆ ಪರ್ಯಾಯ ಮೂಲಕ ಕೃಷ್ಣ ಪೂಜೆ ಆಗಲಿದೆ. ಎರಡು ಧಾರ್ಮಿಕ ಕಾರ್ಯಕ್ರಮ ಜೊತೆ ಜೊತೆಗೇ ನಡೆಯುತ್ತಿರೋದು ಸಂತಸವಾಗಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಪುತ್ತಿಗೆ ಸ್ವಾಮೀಜಿ, ಮಠದ ಕಟ್ಟಲೆಗಳನ್ನು ಮೀರಿ ವಿಶ್ವಕ್ಕೆ ಕೃಷ್ಣನ ಪರಿಚಯಿಸಿದರು. ಉಡುಪಿ ಪರ್ಯಾಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾದರಿಯಾಗಿದ್ದು ಗದ್ದಲ ಗೊಂದಲ ಸಂಘರ್ಷ ಬೇಸರ ಇಲ್ಲದ ಅಧಿಕಾರ ಹಸ್ತಾಂತರ ಇಲ್ಲಿರುತ್ತದೆ ಎಂದರು.

ಹಿರಿಯ ವಿದ್ವಾಂಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿದ್ವಾನ್ ಕೇಶವ ರಾವ್ ತಾಡಪತ್ರಿ, ವಿದ್ವಾನ್ ಡಾ.ಎನ್. ವೆಂಕಟೇಶಾಚಾರ್ಯ, ಹಿರಿಯ ಸಂಶೋಧಕರಾದ ಶತಾವಧಾನಿ ವಿದ್ವಾನ್ ರಾಮನಾಥ ಆಚಾರ್ಯ, ಖ್ಯಾತ ಜ್ಯೋತಿಷಿ ವಿದ್ವಾನ್ ಬೇಳ ಪದ್ಮನಾಭ ಶರ್ಮ, ಇಸ್ಕಾನ್ ಅಧ್ಯಕ್ಷ ಮಧು ಪಂಡಿತದಾಸ್, ಮಣಿಪಾಲ ಗ್ರೂಪ್ ಆಸ್ಪತ್ರೆಯ ಅಧ್ಯಕ್ಷ ಡಾ. ರಂಜನ್ ಪೈ, ಹಿರಿಯ ವಕೀಲರಾದ ಅಶೋಕ್ ಹಾರ್ನಹಳ್ಳಿ, ಮೂರು ವರ್ಷದ ಬಾಲಕಿ ಕೋಕಿಲಾ ವೇಮುರಿ, ಮಹಾಂತೇಶ ಸಣ್ಣನವರ್ ಅವರನ್ನು ಮಠದ ಪರವಾಗಿ ದರ್ಬಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಜಪಾನಿನ ರೆ.ಕೋಶೊ ನಿವಾನೋ, ಕೆನಡಾ ನ್ಯೂ ಬೌನ್ಸಿಕ್ ಸ್ಟೇಟ್ ಶಾಸಕ ಬೆನ್ನಾ ಬೋರ್ಕಿ, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ, ಭೋಜೇಗೌಡ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರೆ, ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮೊದಲ ಪೂಜೆ: 2026ರ ಜ.18ರವರೆಗೆ ಶ್ರೀಕೃಷ್ಣನ ಪೂಜೆಯ ಅಧಿಕಾರವನ್ನು ಇಂದು ನಾಲ್ಕನೇ ಬಾರಿಗೆ ಪಡೆದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, 252ನೇ ಪರ್ಯಾಯ ಪರಂಪರೆ ಯಲ್ಲಿ ಮೊದಲ ಪೂಜೆಯನ್ನು ಗುರುವಾರ ಶ್ರೀಕೃಷ್ಣನಿಗೆ ಸಲ್ಲಿಸಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News