ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಡುಪಿ ಘಟಕದಲ್ಲಿ ನೂತನ ಆಡಳಿತ ಕಚೇರಿಗೆ ಶಂಕುಸ್ಥಾಪನೆ
ಉಪ್ಪೂರು (ಉಡುಪಿ), ಜ.21: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಡುಪಿ ಜಿಲ್ಲೆ ಉಪ್ಪೂರಿನಲ್ಲಿ ರುವ ಉಡುಪಿ ಡೇರಿ ಆವರಣದಲ್ಲಿ ಸುಮಾರು 4.10 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಹೊಸ ಆಡಳಿತ ಕಚೇರಿ ಕಟ್ಟಡಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಅದೇ ರೀತಿ ಸದರಿ ಹಾಲು ಸಂಸ್ಕರಣಾ ಘಟಕದಲ್ಲಿ ಪ್ರತಿದಿನ ಕಾರ್ಯ ನಿರ್ವಹಿಸುತ್ತಿರುವ ಸುಮಾರು 150ರಿಂದ 200 ಮಂದಿ ನೌಕರರ ಊಟ ಉಪಹಾರಕ್ಕೆ 1.20 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಉಪಹಾರ ಗೃಹವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಯಶಪಾಲ್ ಸುವರ್ಣ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದು, ಕನ್ನಡ ನಾಡಿಗೆ ಮಾತ್ರವಲ್ಲದೇ ದೇಶಕ್ಕೆ ಮಾದರಿಯಾಗಿದೆ. ಸುಮಾರು 750 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿರುವ 55ಸಾವಿರಕ್ಕೂ ಅಧಿಕ ಹೈನುಗಾರರಿಗೆ ಉತ್ತಮ ಬೆಲೆಯನ್ನು ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಒಕ್ಕೂಟಗಳಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಾಲ್ಕನೇ ಸ್ಥಾನದಲ್ಲಿದ್ದು, ಅದು ಅಗ್ರಸ್ಥಾನಕೇರುವಂತಾಗಲಿ. ಇದಕ್ಕಾಗಿ ಕೇಂದ್ರ ಸರಕಾರದ ವಿವಿಧ ಯೋಜನೆ ಗಳ ಸದುಪಯೋಗ ಪಡೆಯಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ಒಕ್ಕೂಟದಲ್ಲಿ ಪ್ರತಿದಿನ 3,70,522ಲೀ. ಹಾಲು ಸಂಗ್ರಹಣೆಯಾಗುತಿದ್ದು, (ದ.ಕ. 2,37,644+ ಉಡುಪಿ 1,32,879) ಅನ್ಯ ಜಿಲ್ಲೆಗಳಲ್ಲಿ ಇನ್ನಷ್ಟು ತರಿಸಿ ಪ್ರತಿದಿನ 3,91,655ಲೀ. ಹಾಲು ಮಾರಾಟವಾಗುತ್ತಿದೆ. ಅಲ್ಲದೇ ಪ್ರತಿದಿನ 76,233ಕೆ.ಜಿ.ಮೊಸರು ಸಹ ಮಾರಾಟವಾಗುತ್ತಿದೆ ಎಂದರು.
ಒಕ್ಕೂಟದಲ್ಲಿ 741 ಹಾಲು ಉತ್ಪಾದಕರ ಸಹಕಾರಿ ಸಂಘ ((400+341) ಗಳಿದ್ದು, 55,784 ಸಕ್ರಿಯ ಸದಸ್ಯರನ್ನು (30,577+25,207) ಒಳಗೊಂ ಡಿದೆ. ದ.ಕ.ದಲ್ಲಿ 1015 ಹಾಗೂ ಉಡುಪಿಯಲ್ಲಿ 772 ಸೇರಿದಂತೆ ಒಟ್ಟು 1787 ಸಕ್ರೀಯ ಡೀಲರ್‌ಗಳಿದ್ದಾರೆ. ಒಕ್ಕೂಟವು ಪ್ರತಿ ಲೀ.ಹಾಲನ್ನು 37.74ರೂ.ಗೆ ರೈತರಿಂದ ಖರೀದಿಸುತ್ತಿದೆ. ಒಕ್ಕೂಟದ ವತಿಯಿಂದ ರೈತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ವಿವೇಕ್ ವಿವರಿಸಿದರು.
ಉಡುಪಿ ಘಟಕದಲ್ಲಿ ಐಸ್‌ಕ್ರೀಮ್ ಘಟಕವನ್ನು ಪ್ರಾರಂಭಿಸುವ ಹಾಗೂ ಹೆಚ್ಚು ಹಾಲನ್ನು ಪಡೆದು ಸಂಸ್ಕರಿಸಿ ಪ್ರತಿದಿನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಒಕ್ಕೂಟ ಹಾಕಿಕೊಂಡಿದೆ ಎಂದು ಎಂ.ಡಿ. ವಿವೇಕ್ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಮಾಜಿ ಶಾಸಕ ಕೆ.ರಘುಪತಿ ಭಟ್ ನಾಮಫಲಕ ಅನಾವರಣಗೊಳಿಸಿದರು. ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯಕಾರಿ ಮಂಡಳಿ ಸದಸ್ಯರಾದ ರವಿ ರಾಜ ಹೆಗ್ಡೆ, ಕಾಪು ದಿವಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನರಸಿಂಹ ಕಾಮತ್ ಸಾಣೂರು, ಬಿ.ಸುಧಾಕರ ರೈ, ಸುಧಾ ಕರ ಶೆಟ್ಟಿ, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಬಿ.ಸದಾಶಿವ ಶೆಟ್ಟಿ,ಕಮಲಾಕ್ಷ ಹೆಬ್ಬಾರ್ ಅಲ್ಲದೇ ಉಪನಿರ್ದೇಶಕ ಡಾ. ಅರುಣಕುಮಾರ್ ಶೆಟ್ಟಿ ಎನ್. ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರೆ, ರವಿರಾಜ ಹೆಗ್ಡೆ ಕೊಡವೂರು ವಂದಿಸಿದರು. ಮಾರುಕಟ್ಟೆಯ ಉಪವ್ಯವಸ್ಥಾಪಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.