×
Ad

ಶಿವಾಜಿ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಿ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-02-19 20:19 IST

ಉಡುಪಿ: ಛತ್ರಪತಿ ಶಿವಾಜಿ ಅವರ ಆದರ್ಶ, ಶಿಸ್ತು ಹಾಗೂ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಸೋಮವಾರ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಹಾಗೂ ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಶಿವಾಜಿಯು ಸ್ತ್ರೀಯರ ಕುರಿತಂತೆ ಅಪಾರ ಗೌರವ ಹೊಂದಿದ್ದರು. ಇದು ಯುವಜನತೆಗೆ ಮಾದರಿಯಾಗಿದೆ. ವಿದ್ಯಾರ್ಥಿನಿಯರು ಒಳ್ಳೆಯ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಗಳಾಗಿ ಬದುಕು ನಡೆಸುವಂತೆ ಅವರು ಕರೆ ನೀಡಿದರು.

ಈ ಸಂದರ್ಭ ಶಿವಾಜಿ ಕುರಿತಂತೆ ವಿಶೇಷ ಉಪನ್ಯಾಸ ನೀಡಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಮರಾಠೆ, ಶಿವಾಜಿ ಕುರಿತು ಮಾತನಾಡಿ, ಗೆರಿಲ್ಲ ಯುದ್ಧಗಳ ಮೂಲಕ ಶತ್ರುಗಳನ್ನು ಸದೆ ಬಡಿದು ತಮ್ಮ ಸೈನ್ಯದ ಸಂಖ್ಯೆಯನ್ನು ಏರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅತ್ಯಂತ ಮಹತ್ವಾಕಾಂಕ್ಷಿ ನಾಯಕರಾಗಿದ್ದ ಶಿವಾಜಿ, ಡಚ್ಚರು, ಪೋರ್ಚುಗೀಸರು ಮತ್ತು ಪ್ರೆಂಚರ ವಿರುದ್ಧ ಹೋರಾಡುವ ಮೂಲಕ ಸಾಂಕೇತಿಕವಾಗಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದ್ದರು ಎಂದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ವಿತರಿಸಲಾಯಿತು. ಕನ್ನಡ ಗೀತಗಾಯನ ಕಾರ್ಯಕ್ರಮವೂ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ಕ್ಷತ್ರೀಯ ಮರಾಠ ಸಮುದಾಯ ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದ್ದೇಶ ಸಹಕಾರ ಸಂಘ ಉಡುಪಿ ಇದರ ಅಧ್ಯಕ್ಷ ದಿನೇಶ್ ಸಿ ನಾಯಕ್ ಮೊರೆ, ಶಾಲೆಯ ಬೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯನಿ ಇಂದಿರಾ ಬಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News