ಕುಂದಾಪುರ: ಕೊಚ್ಚುವೇಲಿ-ಮುಂಬೈನ ರೈಲಿಗೆ ಅದ್ಧೂರಿ ಸ್ವಾಗತ
ಕುಂದಾಪುರ, ಮಾ.7: ಕೊಚ್ಚುವೇಲಿ-ಮುಂಬೈಯ ಲೋಕಮಾನ್ಯ ತಿಲಕ್ (ಕುರ್ಲಾ) ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ನೀಡಲಾಗಿದ್ದು, ರೈಲು ಗುರುವಾರ ಮೂಡ್ಲಕಟ್ಟೆಯಲ್ಲಿರುವ ನಿಲ್ದಾಣಕ್ಕೆ ಆಗಮಿಸಿದ ವೇಳೆ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಇಲ್ಲಿ ಹೆಚ್ಚಿನ ರೈಲುಗಳ ನಿಲುಗಡೆ, ನಿಲ್ದಾಣದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದಾಗಿ ಈ ಕೊಚ್ಚುವೇಲಿ- ಮುಂಬಯಿ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಸಿಗುವಂತಾಗಿದೆ ಎಂದರು.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅವಿನಾಶ್ ಉಳ್ತೂರು ಅವರ ಪ್ರಯತ್ನದಿಂದ ಕುಂದಾಪುರದಲ್ಲಿ ಮತ್ತೊಂದು ರೈಲಿಗೆ ನಿಲುಗಡೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳ ನಿಲುಗಡೆಗೆ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು.
ಬಿಜೆಪಿಯ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಮಹಿಳಾ ಮೋರ್ಚಾದ ರೂಪಾ ಪೈ, ಅವಿನಾಶ್ ಉಳ್ತೂರು, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಉದಯ ಭಂಡಾರ್ಕರ್, ಉಪಾಧ್ಯಕ್ಷ ರಾಜೇಶ್ ಕಾವೇರಿ, ಪದ್ಮನಾಭ ಶೆಣೈ, ಸಂಚಾಲಕ ವಿವೇಕ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.