×
Ad

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಮುಂಜಾಗ್ರತಾ ಕ್ರಮ

Update: 2024-03-27 19:54 IST

ಉಡುಪಿ, ಮಾ.27: ಜಿಲ್ಲೆಯಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಲಾರಂಭಿಸಿದ್ದು, ಮುಂದಾರು ಮಳೆ ಜಿಲ್ಲೆಗೆ ಕಾಲಿರಿಸುವ ಮುನ್ನ ಎಪ್ರಿಲ್- ಮೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೈಗೊಂಡಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ಮಾನ್ಸೂನ್ ಮಳೆಯ ಅಭಾವದಿಂದ ವಾಡಿಕೆ ಮಳೆ ಸುರಿಯದೇ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕುಗಳನ್ನು (ಭಾಗಶಃ) ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಈ ತಾಲೂಕುಗಳಿಗೆ ಅಗತ್ಯವಿರುವ ಕುಡಿಯುವ ನೀರಿನ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ತಲಾ 25.00 ಲಕ್ಷ ರೂಗಳಂತೆ ಒಟ್ಟು 75.00 ಲಕ್ಷ ರೂ. ಅನುದಾನವನ್ನು ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ.

ಅಲ್ಲದೆ ಉಳಿದ ಪ್ರತೀ ತಾಲೂಕುಗಳಿಗೆ ತಲಾ 20.00 ಲಕ್ಷ ರೂ.ನಂತೆ ಜಿಲ್ಲೆಗೆ ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಒಟ್ಟು 140 ಲಕ್ಷ ರೂ.ಅನುದಾನವನ್ನು ಒದಗಿಸಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಏಳು ತಾಲೂಕುಗಳ ಒಟ್ಟು 155 ಗ್ರಾಮ ಪಂಚಾ ಯತ್‌ಗಳ ವ್ಯಾಪ್ತಿಯಲ್ಲಿ ಒಟ್ಟು 247 ಗ್ರಾಮಗಳಿವೆ. ಇವುಗಳಲ್ಲಿ ಬ್ರಹ್ಮಾವರ ತಾಲೂಕಿನ 25 ಗ್ರಾಮ ಪಂಚಾಯತ್‌ಗಳ 42 ಗ್ರಾಮಗಳ 337 ಜನವಸತಿ ಪ್ರದೇಶ, ಕಾಪು ತಾಲೂಕಿನ 10 ಗ್ರಾಪಂಗಳ 16 ಗ್ರಾಮಗಳ 100 ಜನವಸತಿ ಪ್ರದೇಶ, ಉಡುಪಿ ತಾಲೂಕಿನ 12 ಗ್ರಾಪಂಗಳ 23 ಗ್ರಾಮಗಳ 164 ವಸತಿ ಪ್ರದೇಶ, ಹೆಬ್ರಿ ತಾಲೂಕಿನ 9 ಗ್ರಾಪಂಗಳ 15 ಗ್ರಾಮಗಳ 79 ಜನವಸತಿ ಪ್ರದೇಶ, ಕಾರ್ಕಳ ತಾಲೂಕಿನ 21 ಗ್ರಾಪಂಗಳ 26 ಗ್ರಾಮಗಳ 88 ಜನವಸತಿ ಪ್ರದೇಶ, ಬೈಂದೂರು ತಾಲೂಕಿನ 15 ಗ್ರಾಪಂಗಳ 22 ಗ್ರಾಮಗಳ 244 ವಸತಿ ಪ್ರದೇಶ ಹಾಗೂ ಕುಂದಾಪುರ ತಾಲೂಕಿನ 38 ಗ್ರಾಪಂಗಳ 59 ಗ್ರಾಮಗಳ 415 ಜನವಸತಿ ಪ್ರದೇಶ ಸೇರಿದಂತೆ ಜಿಲ್ಲೆಯ ಟ್ಟು 130 ಗ್ರಾಮ ಪಂಚಾಯತ್‌ಗಳ 203 ಗ್ರಾಮಗಳ 1427 ಜನವಸತಿ ಪ್ರದೇಶಗಳಲ್ಲಿ ಮುಂದಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆದೂದರಿಂದ ಈ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಸರಕಾರಿ ಹಾಗೂ ಖಾಸಗಿ ಒಡೆತನದ 70ಕ್ಕೂ ಅಧಿಕ ನೀರು ಲಭ್ಯವಿರುವ ಕೊಳವೆ ಬಾವಿಗಳು ಹಾಗೂ 25 ತೆರೆದ ಬಾವಿಗಳನ್ನು ಈಗಾಗಲೇ ಗುರುತಿಸಲಾಗಿದೆ.

ಸಾರ್ವಜನಿಕರು ಸ್ಥಳೀಯ ಗ್ರಾಪಂನಿಂದ ಸರಬರಾಜು ಮಾಡುವ ಕುಡಿಯುವ ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ಹಿತಮಿತವಾಗಿ ಅಗತ್ಯಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ದುರಸ್ತಿ ಬಂದಲ್ಲಿ ತುರ್ತಾಗಿ ದುರಸ್ತಿಗೆ ಕ್ರಮಕೈಗೊಳ್ಳಲು ಸಂಬಂಧಿತ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಈಗಾಗಲೇ ಸೂಚಿಸಲಾಗಿದೆ.

ತೀರಾ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಖಾಸಗಿ ಬೋರ್‌ವೆಲ್ ಹಾಗೂ ಬಾವಿಗಳನ್ನು ಗುರುತಿಸಿ, ಅವುಗಳನ್ನು ಬಾಡಿಗೆಗೆ ತೆಗೆದುಕೊಂಡು ತುರ್ತಾಗಿ ನೀರು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್.ಎಲ್.ಆರ್.ಎಂ. ವಾಹನದ ಮೂಲಕ ಅಥವಾ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸುವ ಅನಿವಾರ್ಯತೆ ಉಂಟಾದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ ವತಿಯಿಂದ ತಕ್ಷಣವೇ ಕ್ರಮ ಕೈಗೊಳ್ಳುವಂತೆಯೂ ಸೂಚನೆಗಳನ್ನು ನೀಡಲಾಗಿದೆ.

ಸಾರ್ವಜನಿಕರು ಕುಡಿಯುವ ನೀರನ್ನು ತೋಟದ ಗಿಡಗಳಿಗೆ, ಕೃಷಿಗೆ, ವಾಹನ ತೊಳೆಯಲು ಹಾಗೂ ಇತರ ಅನ್ಯ ಉದ್ದೇಶಕ್ಕೆ ಬಳಸಬಾರದು. ಅನ್ಯ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸಿದಲ್ಲಿ ಸ್ಥಳೀಯ ಪಂಚಾಯತ್ ವತಿಯಿಂದ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಸಹ ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದಲ್ಲಿ ತೆರೆಯಲಾದ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಪರ್ಕ ಸಂಖ್ಯೆ 18004257049ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News