ಉಡುಪಿ : ಯುವ ಮತದಾರರಿಂದ ಪ್ರಥಮ ಬಾರಿಗೆ ಮತದಾನ

Update: 2024-04-26 14:08 GMT

ಉಡುಪಿ, ಎ.26: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಯುವ ಮತದಾರರು ಬಹಳಷ್ಟು ಹುರುಪಿನಿಂದ ಮತಗಟ್ಟೆಗಳಿಗೆ ಆಗಮಿಸಿ ಪ್ರಥಮ ಬಾರಿಗೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿದರು.

ಕ್ಷೇತ್ರದಲ್ಲಿ ಒಟ್ಟು 29,909 ಮಂದಿ ಯುವ ಮತದಾರರು ಈ ಬಾರಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನ ಕ್ಷೇತ್ರದಲ್ಲಿ ಒಟ್ಟು 17156 ಯುವ ಮತದಾರರಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮತದಾನ ಮಾಡಿರುವ ಬಗ್ಗೆ ವರದಿಯಾಗಿದೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಆಗಮಿಸಿದ ಯುವ ಮತದಾರೆ ಪ್ರಜ್ಞಾ, ಪ್ರಥಮ ಬಾರಿಗೆ ಮತದಾನ ಮಾಡಿ ದರು. ಬಳಿಕ ಮಾತನಾಡಿದ ಅವರು, ಕೋಮು ಸೌಹಾರ್ದತೆ ಕಾಪಾಡುವ ಹಾಗೂ ಯುವಕರಿಗೆ ಉದ್ಯೋಗ ನೀಡುವ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಮೊದಲ ಬಾರಿಗೆ ತುಂಬಾ ಖುಷಿಯಿಂದ ಮತದಾನ ಮಾಡಿದ್ದೇನೆ ಎಂದರು.

ಅದೇ ರೀತಿ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿನ ಮತಗಟ್ಟೆ ಯಲ್ಲಿ ಯುವ ಮತದಾರ ಆಕಾಂಕ್ಷ್ ರಾವ್ ಮೊದಲ ಬಾರಿಗೆ ತನ್ನ ಹಕ್ಕನ್ನು ಚಲಾಯಿಸಿದರು. ಮೊದಲ ಬಾರಿಗೆ ಮತದಾನ ಮಾಡಿರುವ ಬಗ್ಗೆ ಖುಷಿ ಹಾಗೂ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಪ್ರಥಮ ಬಾರಿಗೆ ಮತದಾನ ಮಾಡಿದ ಆ್ಯಂಡ್ರಿಕಾ ಡಿಸೋಜ ಸಂಭ್ರಮ ವ್ಯಕ್ತ ಪಡಿಸಿದರು. ಮೊದಲ ಬಾರಿಗೆ ಮತದಾನ ಮಾಡುತ್ತಿರುವುದರಿಂದ ಆ ಪ್ರಕ್ರಿಯೆಯನ್ನು ತನ್ನ ತಾಯಿಯಿಂದ ಕೇಳಿ ತಿಳಿದು ಕೊಂಡೇ. ತುಂಬಾ ಖುಷಿ ಯಾಗಿದೆ ಎಂದು ಹೇಳಿದರು.

ಅಂಬುಲೆನ್ಸ್‌ನಲ್ಲಿ ತಾಯಿಯನ್ನು ಕರೆತಂದು ಮತ ಹಾಕಿಸಿದ ಪುತ್ರ

ಅನಾರೋಗ್ಯದಿಂದ ನಡೆಯಲಾಗದ ಸ್ಥಿತಿಯಲ್ಲಿರುವ ತಾಯಿಯನ್ನು ಪುತ್ರನೋರ್ವ ಅಂಬುಲೆನ್ಸ್‌ನಲ್ಲಿ ಕರೆತಂದು ಮತ ಹಾಕಿಸಿರುವ ಘಟನೆ ನಡೆದಿದೆ.

83 ವರ್ಷದ ವಿ.ಕೆ ಲಲಿತಾ ಅವರನ್ನು ಪುತ್ರ ವಿ.ವಾಸುದೇವ ಹಂದೆ ತನ್ನದೆ ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಕೋಯಕುಟ್ಟಿ ಹಾಲ್ 21ನೇ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸಿದ್ದಾರೆ. ಇವರ ನಡೆ ವ್ಯಾಪಾಕ ಪ್ರಶಂಸೆಗೆ ಪಾತ್ರವಾಗಿದೆ.

ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜ(98) ಮತ್ತು ಕ್ರಿಸ್ತಿನ್ ಡಿಸೋಜ(93) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಉದ್ಯಾವರ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ ಮತವನ್ನು ಚಲಾಯಿಸಿದರು.








Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News