ಉಡುಪಿ: ಮತದಾನ ಪ್ರಾರಂಭದಲ್ಲಿ ಬಿರುಸು, ಬಿಸಿಲೇರಿದಂತೆ ನಿರುತ್ಸಾಹ

Update: 2024-04-26 14:40 GMT

ಉಡುಪಿ: ಜಿಲ್ಲೆಯಲ್ಲಿ ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದು ಸಂಜೆ ಮುಕ್ತಾಯ ಗೊಂಡಿದೆ. ಬೆಳಗ್ಗೆ 7ಕ್ಕೆ ಪ್ರಾರಂಭ ಗೊಂಡ ಮತದಾನದ ಪ್ರಾರಂಭದಲ್ಲಿದ್ದ ಉತ್ಸಾಹವನ್ನು ಮತದಾರರು ಬಿಸಿಲು ಮೇಲೇರಿ ಬರುತಿದ್ದಂತೆ ಕುಂದಿ, ಸಂಜೆ ನಾಲ್ಕು ಗಂಟೆಯ ಬಳಿಕ ಮತ್ತೆ ಚುರುಕಾಗಿ ನಡೆದು ಮುಕ್ತಾಯಗೊಂಡಿತು.

ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉಷ್ಣತೆಯ ಪ್ರಮಾಣ, ಬಿಸಿಲಿನ ಪ್ರಖರತೆ ಹಾಗೂ ಅಪರಾಹ್ನ 12ರ ಬಳಿಕ ಬೀಸುತ್ತಿರುವ ಬಿಸಿಗಾಳಿಯ ಕಾರಣ, ಜನತೆ ಮತದಾನ ಪ್ರಾರಂಭಗೊಳ್ಳುತ್ತಿದಂತೆ ವಯೋಮಾನದ ಪರಿವೆ ಇಲ್ಲದೇ ಮತಗಟ್ಟೆಯತ್ತ ಧಾವಿಸಿ ಬರುವ ದೃಶ್ಯ ಎಲ್ಲಡೆ ಕಂಡುಬಂತು. ಹೀಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸರದಿ ಸಾಲು ಕಂಡುಬಂತು. ಯುವ ಮತದಾರರನ್ನು ಹೊರತು ಪಡಿಸಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು.

ಎಲ್ಲಾ ಮತಗಟ್ಟೆಗಳಲ್ಲಿ ವೀಲ್‌ಚೇರ್ ವ್ಯವಸ್ಥೆ ಮಾಡಿದ್ದು, ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೂತ್‌ನಲ್ಲಿ ಕೊಂಡಾಡಿ ಶಾಲೆ ಬಳಿಯ ನಿವಾಸಿ ಸುಂದರ ನಾಯ್ಕ್ (70) ಅವರಿಗೆ ವೀಲ್ಹ್‌ಚೇರ್‌ನಲ್ಲಿ ಬರಲು ಶಾಲೆಯ ಸ್ಕೌಟ್ ವಿದ್ಯಾರ್ಥಿಗಳು ನೆರವಾದರು. ವೃದ್ದ ಮತದಾರರು ತಮ್ಮ ಮನೆಯವರ ಸಹಾಯದಿಂದ ಬಂದು ಮತ ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲನ್ನು ವ್ಯವಸ್ಥೆಗೊಳಿಸಿ ಅವರಿಗೆ ಬೇಗನೇ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರೆ, ಹಿರಿಯ ನಾಗರಿಕರನ್ನು ಕಂಡರೇ ಕೂಡಲೇ ಕರೆದು ಅವರಿಗೂ ಅವಕಾಶ ಮಾಡಿ ಕೊಡಲಾಗುತ್ತಿತ್ತು.

ಆದರೆ ಹಿರಿಯ ನಾಗರಿಕರು ಇದಕ್ಕಾಗಿ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಮತಗಟ್ಟೆ ಅಧಿಕಾರಿಗಳೊಂದಿಗೆ ಬೇಡಿಕೊಳ್ಳು ತಿದ್ದ ದೃಶ್ಯವೂ ಕೆಲವು ಕಡೆ ಕಂಡುಬಂದವು. ಜಿಲ್ಲೆಯಲ್ಲಿ ಹತ್ತಾರು ಕಡೆಗಳಲ್ಲಿ ಹಸೆ ಮಣೆ ಏರುವ ವಧು-ವರರು ಹೆಚ್ಚಾಗಿ ಮದುವೆ ವೇಷಭೂಷಣದಲ್ಲೇ ಮೊದಲು ಮತಗಟ್ಟೆಗೆ ಧಾವಿಸಿ ಬಂದು ಮತ ಚಲಾಯಿಸಿದ ಬಳಿಕ ಮದುವೆ ಮಂಟಪಗಳಿಗೆ ತೆರಳುವ ದೃಶ್ಯ ಕಂಡುಬಂತು. ಕೆಲವರು ಮದುವೆ ಶಾಸ್ತ್ರಗಳೆಲ್ಲ ಮುಗಿದ ಬಳಿಕವೂ ಬಂದು ತಪ್ಪದೇ ಮತ ಚಲಾಯಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ 12.8ರಷ್ಟು ಮತದಾನವಾದರೆ, 11ಗಂಟೆಗೆ ಇದು ಶೇ.29 ಕ್ಕೇರಿತ್ತು. ನಂತರ ಮತದಾನ ಬಿರುಸು ಪಡೆದು ಅಪರಾಹ್ನ 1ಗಂಟೆಗೆ ಇದು ಶೇ.46.5ಕ್ಕೇರಿತು. ಅದೇ ಅಪರಾಹ್ನ 3ಗಂಟೆಗೆ ಶೇ.57.5ರಲ್ಲಿದ್ದರೆ, ಸಂಜೆ 5ಗಂಟೆ ಹೊತ್ತಿಗೆ ಇದು ಶೇ.72.13ಕ್ಕೆ ನೆಗೆಯಿತು. ಅದರಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಉತ್ತಮ ಮತದಾನವನ್ನು ಕಂಡರೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಇದು ಸ್ವಲ್ಪ ನಿಧಾನಗತಿಯಲ್ಲಿತ್ತು.

ಉಡುಪಿಯ ಪತ್ರಕರ್ತರ ತಂಡ ಹತ್ತು ಗಂಟೆ ಸುಮಾರಿಗೆ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೂತ್‌ಗೆ ತೆರಳಿದಾಗ ಅಲ್ಲಿ ಶೇ.22ರಷ್ಟು ಮತದಾನವಾಗಿತ್ತು. ಇಲ್ಲಿನ ನಾಲ್ಕೂ ಮತಗಟ್ಟೆಗಳಲ್ಲಿ ಉದ್ದನೆಯ ಸರದಿ ಸಾಲು ಕಂಡುಬಂತು. ಮೊದಲ ಬಾರಿ ಮತ ಹಾಕುವ ಉತ್ಸಾಹದಲ್ಲಿದ್ದ ಯುವ ಮತದಾರರೊಂದಿಗೆ 85 ವರ್ಷ ಪ್ರಾಯ ಮೆಣಕು ಶೆಟ್ಟಿ ಸಹ ನಿಧಾನವಾಗಿ ಬಂದು ಮತ ಹಾಕಿದರು.

ಕಣ್ಣು ಸರಿಯಾಗಿ ಕಾಣದಿದ್ದರೂ ಮಗಳ ನೆರವಿನಿಂದ ಬೂತ್‌ಗೆ ಬಂದ ಕೊಂಡಾಡಿ ಕೊಲ್ಯದ ಮೆಣಕು ಶೆಟ್ಟಿ ಮತಹಾಕಿ ಬಂದು ತಾನು ಈವರೆಗಿನ ಎಲ್ಲಾ ಚುನಾವಣೆಗಳಲ್ಲೂ ಮತ ಹಾಕಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಆದರೆ ಪ್ರಾಯಶ: ಇದು ತನ್ನ ಕೊನೆಯ ಮತದಾನ ಇರಬಹುದು ಎಂದು ಅವರು ನುಡಿದರು.

ಮಹಿಳೆಯರ ಉದ್ದನೆ ಸಾಲು: ಪಾಡಿಗಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಬೂತ್‌ಗಳಲ್ಲಿ ಶೇ.27ರಷ್ಟು ಮಂದಿ ಮತದಾನ ಮಾಡಿದ್ದು, ಮಹಿಳೆಯರ ಉದ್ದನೆಯ ಸಾಲು ಮತದಾನಕ್ಕಾಗಿ ಕಾದು ನಿಂತಿತ್ತು. ಮನೆಗೆಲಸ ಬೇಗನೇ ಮುಗಿಸಿ ಬಿಸಿಲೇರುವುದರೊಳಗೆ ಮತಹಾಕಲು ಬಂದಿರುವುದಾಗಿ ಅವರು ಹೇಳಿಕೊಂಡರು.

ಇಲ್ಲಿನ ಒಂದು ಬೂತ್‌ನಲ್ಲಿ 1250 ಮತಗಳಲ್ಲಿ 336 ಅದಾಗಲೇ ಚಲಾವಣೆಯಾಗಿತ್ತು. 160 ಪುರುಷರು ಹಾಗೂ 176 ಮಹಿಳೆಯರು ಅದಾಗಲೇ ಮತ ಹಾಕಿದ್ದರು. ಇನ್ನೊಂದು ಮತಗಟ್ಟೆಯಲ್ಲಿ 1372 ಮತಗಳಲ್ಲಿ 360 ಮಂದಿ ಮತ ಹಾಕಿದ್ದರು. 196 ಪುರುಷರು ಹಾಗೂ 164 ಮಹಿಳೆಯರು ಬಂದು ಮತ ಹಾಕಿದ್ದರು.

ಮೊದಲು ಬಾರಿ ಮತ ಹಾಕಲು ಬಂದ ಹಿರಿಯಡ್ಕ ಸರಕಾರಿ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷದಲ್ಲಿ ಕಲಿಯುತ್ತಿರುವ ಶ್ರೀರಕ್ಷಾ ಪೂಜಾರಿ, ಇಬ್ಬರು ಅಭ್ಯರ್ಥಿಗಳಲ್ಲಿ ಒಳ್ಳೆಯ ಕೆಲಸ ಮಾಡುವ ಬಗ್ಗೆ ತನಗೆ ಭರವಸೆ ಇರುವ ಅಭ್ಯರ್ಥಿಗೆ ಮತ ಹಾಕಿರುವುದಾಗಿ ತಿಳಿಸಿದರು.

ಸೋಮೇಶ್ವರದಲ್ಲಿ ಶೇ.55: ಆದರೆ ನಿಜವಾಗಿಯೂ ದಾಖಲೆಯ ಮತದಾನವಾಗಿದ್ದು ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಒಂದಾದ ನಾಡ್ಪಾಲು ಸೋಮೇಶ್ವರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ನಲ್ಲಿ. ಹಿಂದೆಲ್ಲಾ ಪೊಲೀಸರ ಬಿಗು ಪಹರೆಯೊಂದಿಗೆ ಮತದಾನ ನಡೆಯುತಿದ್ದ ಈ ಬೂತ್‌ನಲ್ಲಿ ಈ ಬಾರಿ ಜನತೆ ಆರಾಮವಾಗಿ ಬಂದು ಮತಚಲಾಯಿಸಿದರು.

ಪತ್ರಕರ್ತರು 11:45ರ ಸುಮಾರಿಗೆ ಈ ಮತಗಟ್ಟೆಗೆ ಭೇಟಿ ನೀಡಿದಾಗ ಅದಾಗಲೇ ಶೇ.55.43ರಷ್ಚು ಮತದಾನ ವಾಗಿತ್ತು. ಈ ಮತಗಟ್ಟೆಯಲ್ಲಿ 671 ಮತದಾರರಿದ್ದು, ಇವರಲ್ಲಿ 372 ಅದಾಗಲೇ ಮತ ಹಾಕಿ ತೆರಳಿದ್ದರು. ಇವರಲ್ಲಿ 187 ಪುರುಷರು ಹಾಗೂ 185 ಮಹಿಳೆಯರು ಸೇರಿದ್ದರು. ನಾಡ್ಪಾಲಿನ 85 ವರ್ಷ ಪ್ರಾಯದ ಕಮಲ ಶೆಟ್ಟಿ ಹೆಣ್ಣು ಮಕ್ಕಳ ನೆರವಿನಿಂದ ಬಂದು ಮತ ಹಾಕಿದರು.

ಅದೇ ರೀತಿ ಬಡಾ ತಿಂಗಳೆಯ 80ರ ಹರೆಯದ ಆನಂದ ಶೆಟ್ಟಿ ಹಾಗೂ ಅವರ ಪತ್ನಿ ಮತದಾನಕ್ಕಾಗಿ ಮುಂಬಯಿಯಿಂದ ಬಂದ ಮಗ-ಸೊಸೆ ಯೊಂದಿಗೆ ವಾಹನದಲ್ಲಿ ಬಂದು ಮತ ಹಾಕಿದರು. ಇಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ತಮ್ಮ ಮನೆಯಿಂದ ಬರಲು ರಸ್ತೆಯೇ ಇಲ್ಲ. ರಸ್ತೆ ಮಾಡಿದರೆ ಮನೆಯಲ್ಲಿ ಮುದುಕರಾದ ನಾವು ಮಾತ್ರ ಇರುವುದರಿಂದ ಅನುಕೂಲವಾ ಗುತ್ತದೆ ಎಂದರು.

ಒಂದು ಗಂಟೆ ವಿಳಂಬ: ಸೋಮೇಶ್ವರ ಪೇಟೆ ಮತಗಟ್ಟೆಯಲ್ಲಿ ಮತದಾನ ಒಂದು ವಿಳಂಬವಾಗಿ ಪ್ರಾರಂಭಗೊಂಡಿತ್ತು ಎಂದು ತಿಳಿದುಬಂದಿದೆ. 7ಗಂಟೆಗೆ ಮತದಾನ ಪ್ರಾರಂಭವಾದರೂ ಮೊದಲ ಮತ ಬೀಳುವಾಗಲೇ ಮತಯಂತ್ರ ಕೈಕೊಟ್ಟು ಮತದಾನ ಸ್ಥಗಿತಗೊಂಡಿತ್ತು. ಬಳಿಕ ಅಧಿಕಾರಿಗಳು ತಂತ್ರಜ್ಞರೊಂದಿಗೆ ಬಂದು ಯಂತ್ರ ದುರಸ್ತಿ ಮಾಡಿದ್ದು, ಎಂಟು ಗಂಟೆಗೆ ಮತದಾನ ಆರಂಭವಾಗಿದೆ. ಅಷ್ಟರಲ್ಲೇ ಸುಮಾರು 25-30 ಮಂದಿ ಮತ ಹಾಕದೇ ತೆರಳಿದ್ದರು ಎಂದು ತಿಳಿದು ಬಂದಿದೆ. ಆದರೆ ಬಳಿಕ ಇಲ್ಲಿ ಬಿರುಸಿನ ಮತದಾನವಾಗಿತ್ತು.

ಅಲ್ಲೇ ಸಮೀಪದ ಕಾಸನಮಕ್ಕಿ ಶಾಲಾ ಮತಗಟ್ಟೆಯಲ್ಲೂ 743 ಮಂದಿ ಮತದಾರರಲ್ಲಿ 358 ಮಂದಿ (ಶೇ.48.18) ಅದಾಗಲೇ ಮತ ಚಲಾಯಿಸಿ ಆಗಿತ್ತು. 177 ಪುರುಷರು, 181 ಮಹಿಳೆಯರು ಬಂದು ಮತ ಹಾಕಿದ್ದರು. ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಖಿ ಮತಗಟ್ಟೆಯಲ್ಲಿದ್ದ 1455 ಮತದಾರರಲ್ಲಿ 621 ಮಂದಿ ಒಂದು ಗಂಟೆಗೆ ಮತ ಹಾಕಿದ್ದರು. 321 ಮಂದಿ ಪುರುಷರು ಹಾಗೂ 300 ಮಂದಿ ಮಹಿಳೆಯರು ಮತ ಹಾಕಿದ್ದರು. ಇಲ್ಲಿ ನಾಲ್ವರು 85+ ಮತದಾರರು ಹಾಗೂ 9 ವಿಕಲಚೇತನ ಮತದಾರರು ಮತಹಾಕಿದ್ದು ವಿಶೇಷವಾಗಿತ್ತು.

ಅಪರಾಹ್ನದ ಬಳಿಕ ನಿಧಾನಗತಿಯಲ್ಲಿದ್ದ ಮತದಾನ ಪ್ರಮಾಣ 4 ಗಂಟೆಯ ವೇಳೆಗೆ ಬಿಸಿಲು ಕಡಿಮೆಯಾದ ಕಾರಣ ಮತ್ತೆ ಚುರುಕಾಯಿತು. ಮತಗಟ್ಟೆಗಳ ಮುಂದೆ ಜನರ ಸಾಲು ಕಂಡು ಬರತೊಡಗಿತು. ಇದರಿಂದ ಮೂರುಗಂಟೆಗೆ ಶೇ.57.5ರಷ್ಟಿದ್ದ ಮತದಾನದ ಪ್ರಮಾಣ ಐದು ಗಂಟೆಯ ವೇಳೆಗೆ 73ಕ್ಕೆ ನೆಗೆದಿತ್ತು.

ಜಿಲ್ಲೆಯಲ್ಲಿ ಸ್ಥಾಪಿಸಿದ್ದ 20 ಸಖಿ ಮತಗಟ್ಟೆಗಳಲ್ಲೂ ಮಹಿಳೆಯರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು. ಸಖಿ ಮತಗಟ್ಟೆಯಲ್ಲಿ ಮಹಿಳೆಯರಿಗಾಗಿ ಸೆಲ್ಫಿ ಜೋನ್ ವ್ಯವಸ್ಥೆಗೊಳಿಸಲಾಗಿತ್ತು.








 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News