ಅವಕಾಶ ತಪ್ಪಿದ ಕಾರಣಕ್ಕೆ ಯಡಿಯೂರಪ್ಪನ್ನು ಟೀಕಿಸುವುದು ಸರಿಯಲ್ಲ: ಬಿ.ವೈ.ವಿಜಯೇಂದ್ರ
ಉಡುಪಿ, ಮೇ 27: ಮಾಜಿ ಶಾಸಕ ರಘುಪತಿ ಭಟ್‌ಗೆ ನಮ್ಮ ಪಕ್ಷ ಅಥವಾ ಸಂಘಟನೆಯಿಂದ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ಅನೇಕ ಅವಕಾಶಗಳು ಸಿಕ್ಕಿದೆ. ಅದನ್ನು ಅವರು ಬಳಸಿಕೊಂಡಿದ್ದಾರೆ ಮತ್ತು ಕೆಲವು ಬಾರಿ ಎಡವಿದ್ದಾರೆ. ಯಾವುದೋ ಕಾರಣಕ್ಕೆ ಅವಕಾಶ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರನ್ನು, ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದು ಒಪ್ಪಲು ಸಾಧ್ಯವಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯ ಹೋಟೆಲ್ ಕಿದಿಯೂರು - ಮಾಧವ ಕೃಷ್ಣ ಸಭಾಂಗಣದಲ್ಲಿ ಸೋಮವಾರ ನಡೆದ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಘಟ ನಾಯಕರ ಜಿಲ್ಲಾ ಮಟ್ಟದ ಸಮಾವೇಶವನ್ನು ದ್ದೇಶಿಸಿ ಅವರು ಮಾತನಾಡುತಿದ್ದರು.
ಯಡಿಯೂರಪ್ಪ ಸಾಕಷ್ಟು ಪರಿಶ್ರಮ ಪಟ್ಟು ನಗರಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಹಳ್ಳಿಹಳ್ಳಿಗಳಿಗೆ ವಿಸ್ತಾರ ಮಾಡಿದ್ದಾರೆ. ಪಕ್ಷ ಕಟ್ಟಲು ಯಡಿಯೂರಪ್ಪ ಅವರ ಶ್ರಮ ಅಪಾರವಾಗಿದೆ. ಆ ಕಾರಣದಿಂದ ಪಕ್ಷ ಇಷ್ಟು ಎತ್ತರಕ್ಕೆ ಬೆಳೆದಿದೆ. ಪಕ್ಷದ ಒಮ್ಮತ ನಿರ್ಧಾರದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದನ್ನು ಒಪ್ಪದವರು ದುಸ್ಸಹಾಸಕ್ಕೆ ಕೈ ಹಾಕಿದ್ದಾರೆ. ಆದರೆ ಬಿಜೆಪಿ ತನ್ನ ಕಾರ್ಯಕತರು ಹಾಗೂ ಸಂಘಟನೆ ಶಕ್ತಿಯಿಂದ ನೈರುತ್ಯದ ಎರಡೂ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಗೆಲವು ಸಾಧಿಸಲಿದೆ. ಇದನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮಾತನಾಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಅರುಣ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.
‘ರಘುಪತಿ ಭಟ್ ಗೆಲ್ಲುವ ಭ್ರಮೆಯಲ್ಲಿದ್ದಾರೆ’
ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ರಘುಪತಿ ಭಟ್‌ಗೆ ಪಕ್ಷದಿಂದ ಯಾವತ್ತು ಅನ್ಯಾಯ ಆಗಿಲ್ಲ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಕಾಶ ಸಿಗಬೇಕಾದವರು ಅನೇಕ ಮಂದಿ ನಮ್ಮ ಪಕ್ಷದಲ್ಲಿದ್ದಾರೆ. ಸಿಕ್ಕವರಿಗೆ ಮತ್ತೆ ಮತ್ತೆ ಅವಕಾಶ ಸಿಗಬೇಕು ಎಂಬುದು ಸರಿಯಲ್ಲ. ರಘುಪತಿ ಭಟ್ ತಾನು ಗೆಲ್ಲುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ಪಕ್ಷ, ಸಂಘಟನೆ ಬಲಿಷ್ಠವಾಗಿದೆ. ಧನಂಜಯ್ ಸರ್ಜಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಚುನಾಯಿತ ಸರಾಕರ ಇದೆ ಎಂಬುದನ್ನೇ ಜನ ಮರೆತಿದ್ದಾರೆ. ಪೋಲಿಸ್ ಅಧಿಕಾರಿಗಳು, ಸರಕಾರದ ಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಮಧು ಬಂಗಾರಪ್ಪ ಹೇರ್ ಕಟಿಂಗ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರು ಶಿಸ್ತಿನಿಂದ ಇರಬೇಕು. ನಾನು ಹೇಳಿರುವುದು ಶಿಕ್ಷಕರು, ಪೋಷಕರು, ಮಕ್ಕಳ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯ ಅಲ್ಲ. ಕನ್ನಡ ಗೊತ್ತಿರುವವರು ಸಚಿವರಾದರೆ ರಾಜ್ಯಕ್ಕೂ ಮಕ್ಕಳ ಶಿಕ್ಷಣಕ್ಕೂ ಒಳಿತು ಎಂದರು.
ಮಧು ಬಂಗಾರಪ್ಪ ಶಿಕ್ಷಣವನ್ನು ಸರಿಯಾದ ದಾರಿಯಲ್ಲಿ ತೆಗೆದು ಕೊಂಡು ಹೋಗುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಕನ್ನಡ ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕನ್ನಡ ಗೊತ್ತಿರುವ, ಶಿಕ್ಷಣಕ್ಕೆ ಆದ್ಯತೆ ಕೊಡುವ ವ್ಯಕ್ತಿಗೆ ಅಧಿಕಾರ ಕೊಡಬೇಕು. ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಪಾವಿತ್ರತೆ ಇದೆ. ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಶಾಲೆಗೆ ಬರಬೇಕು. ಹಾಗಾಗಿ ಶಿಕ್ಷಣ ಸಚಿವರು ಕೂಡ ಶಿಸ್ತಿನಿಂದ ಇರಬೇಕು ಎಂದು ಅವರು ಹೇಳಿದರು.