ಕೋಟ ಪಡುಕೆರೆ ಯುವಕನ ಕೊಲೆ ಪ್ರಕರಣ| ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಡಿ.17: ಕೋಟ ಸಮೀಪದ ಪಡುಕೆರೆಯ ಸಂತೋಷ್ ಮೊಗವೀರ(31) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಡಿ.14ರಂದು ರಾತ್ರಿ ವೇಳೆ ಪಡುಕೆರೆ ಸರ್ಕಲ್ ಬಳಿ ಕುಡಿದ ಮತ್ತಿನಲ್ಲಿ ದರ್ಶನ್, ಕೌಶಿಕ್, ಅಂಕಿತ್, ಸುಜನ್ ಎಂಬವರು ನಡೆಸಿದ ಹಲ್ಲೆಯಿಂದಾಗಿ ಸಂತೋಷ್ ಮೊಗವೀರ ಮೃತಪಟ್ಟಿದ್ದು, ಈ ಸಂಬಂಧ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಎಲ್ಲ ಆರೋಪಿ ಗಳಿಗೆ ಡಿ.29ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
‘ಇವರೆಲ್ಲ ಇತ್ತೀಚೆಗೆ ಶಬರಿಮಲೆಗೆ ವೃತ್ತ ಆಚರಿಸಿಕೊಂಡು ಹೋಗಿದ್ದು, ಇವರ ಗುರುಸ್ವಾಮಿ ವಿಚಾರವಾಗಿ ಕೆಟ್ಟದಾಗಿ ಮಾತನಾಡಿದಕ್ಕೆ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಅದೇ ರೀತಿ ಇನ್ನೊಂದು ಹುಡುಗಿ ವಿಚಾರವಾಗಿ ಇವರ ಮಧ್ಯೆ ಗಲಾಟೆ ಆಗಿದೆ ಎಂಬುದು ಕೂಡ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿ ಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು. ಇದರಿಂದ ಕೊಲೆಗೆ ಸ್ಪಷ್ಟ ಕಾರಣ ತಿಳಿದುಬರಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.